
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ಪಕ್ಷ ಅಭೂತ ಪೂರ್ವ ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ವಿವಿಧ ರಾಜಕೀಯ ಗಣ್ಯರು ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿ ಮೋದಿ
ದೂರವಾಣಿ ಕರೆ ಮಾಡಿ ಕೇಜ್ರಿವಾಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ನಿಮ್ಮನ್ನು ವೈಯಕ್ತಿಕವಾಗಿ ಬಂದು ಭೇಟಿಯಾಗುತ್ತೇನೆ ಎಂದು ಕೇಜ್ರಿವಾಲ್ ಮೋದಿ ಅವರಿಗೆ ತಿಳಿಸಿದ್ದಾರೆ. 2-3 ದಿನದಲ್ಲಿ ಕೇಜ್ರಿವಾಲ್ ಮೋದಿ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ.
ದ್ವೇಷ ರಾಜಕಾರಣ ಮಾಡುವವರಿಗೆ ತಕ್ಕ ಪಾಠ
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಜಯಗಳಿಸಿರುವುದು ರಾಜಕಾರಣಕ್ಕೆ ಹೊಸ ತಿರುವು ನೀಡಿದ್ದು, ದ್ವೇಷ ರಾಜಕಾರಣದಲ್ಲಿ ತೊಡಗಿರುವ ರಾಜಕೀಯ ಶಕ್ತಿಗಳಿಗೆ ಬಹು ದೊಡ್ಡ ಸೋಲುಂಟಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪ್ರಧಾನಿ ವಿರುದ್ಧದ ಜನಾಭಿಪ್ರಾಯವಲ್ಲ-ಕಿರಣ್ ಬೇಡಿ
ದೆಹಲಿ ಚುನಾವಣೆ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವ್ಯಕ್ತವಾಗಿರುವ ಜನಾದೇಶವಲ್ಲ ಎಂದು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಹೇಳಿದ್ದಾರೆ. ಮತದಾರರು ಆಮ್ ಆದ್ಮಿ ಪಕ್ಷಕ್ಕೆ ಸಂಪೂರ್ಣ ಬಹುಮತದಲ್ಲಿ ಸರ್ಕಾರ ರಚಿಸಲು ಎರಡನೇ ಅವಕಾಶ ನೀಡಿದ್ದು , ಬಿಜೆಪಿಯನ್ನು ಹಾಗೂ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ದೆಹಲಿ ಜನರ ಆಯ್ಕೆ ಸರಿಯಾಗಿದೆ : ಅಣ್ಣಾ ಹಜಾರೆ
ಚುನಾವಣೆಯಲ್ಲಿ ದೆಹಲಿ ಜನರು ಸರಿಯಾದ ಆಯ್ಕೆ ಮಾಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಪ್ರತಿಕ್ರಿಯೆ ನೀಡಿದ್ದಾರೆ. ಕೇಜ್ರಿವಾಲ್ ದೆಹಲಿ ಜನರ ವಿಶ್ವಾಸ ಗೆದ್ದಿದ್ದರಿಂದ ಅವರನ್ನು ಮತದಾರರು ಗೆಲ್ಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಮೋದಿ ಗೆಲುವಿನ ಓಟಕ್ಕೆ ಹಿನ್ನಡೆ-ಸಿಎಂ ಸಿದ್ದು
'ದೆಹಲಿ ಚುನಾವಣೆಯ ಸೋಲಿನಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಗೆಲುವಿನ ನಾಗಾಲೋಟಕ್ಕೆ ಹಿನ್ನಡೆ ಉಂಟಾಗಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. 'ದೆಹಲಿ ಜನರು ಆಮ್ ಆದ್ಮಿ ಪಕ್ಷದ ಮೇಲೆ ವಿಶ್ವಾಸವಿಟ್ಟು ಮತ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಗಳು ಆಪ್‌ಗೆ ಹೋಗಿವೆ' ಎಂದು ತಿಳಿಸಿದ್ದಾರೆ.
ಜನರ ತೀರ್ಪಿಗೆ ತಲೆಬಾಗುತ್ತೇವೆ-ರವಿಶಂಕರ್ ಪ್ರಸಾದ್
ಜನತೆಯ ತೀರ್ಪಿಗೆ ನಾವು ತಲೆ ಬಾಗುತ್ತೇವೆ. ದೆಹಲಿ ಜನರು ಕೇಜ್ರಿವಾಲ್ ಅವರಿಗೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಿದ್ದಾರೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಸೋಲಿನ ಹೊಣೆ ಹೊರುತ್ತೇನೆ-ಸತೀಶ್ ಉಪಾಧ್ಯಾಯ
ದೆಹಲಿ ಚುನಾವಣೆ ಸೋಲಿನ ಹೊಣೆಯನ್ನು ನಾನು ಹೊರುತ್ತೇನೆ. ಕಿರಣ್ ಬೇಡಿ ಅವರನ್ನು ಕಣಕ್ಕಿಳಿಸಿದ್ದು ನಮ್ಮ ತಪ್ಪು ನಿರ್ಧಾರವಾಗಿರಲಿಲ್ಲ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಸತೀಶ್ ಉಪಾಧ್ಯಾಯ ಪ್ರತಿಕ್ರಿಯೆ ನೀಡಿದ್ದಾರೆ.
ದೆಹಲಿ ಜನರ ಆಯ್ಕೆ ಆಪ್ ಆಗಿತ್ತು-ರಾಹುಲ್ ಗಾಂಧಿ
ದೆಹಲಿ ಜನರು ಆಮ್ ಆದ್ಮಿ ಪಕ್ಷವನ್ನು ಆಯ್ಕೆ ಮಾಡಿದ್ದು, ಅರವಿಂದ್ ಕೇಜ್ರಿವಾಲ್ ಅವರಿಗೆ ನನ್ನ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಜನರ ತೀರ್ಪನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಮೋದಿ ಅಲೆ ಮುಗಿದ ಅಧ್ಯಾಯ-ದೇವೇಗೌಡ
ಪ್ರಧಾನಿ ನರೇಂದ್ರ ಮೋದಿ ಅಲೆ ಇದೀಗ ಮುಗಿದ ಅಧ್ಯಾಯ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ. ದೆಹಲಿ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ರಾಷ್ಟ್ರೀಯ ಪಕ್ಷಗಳೆಲ್ಲಾ ಸೇರಿ ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.
ಅನಿರೀಕ್ಷಿತ ಫಲಿತಾಂಶ-ಕನಿಮೋಳಿ
ಆಮ್ ಆದ್ಮಿ ಪಕ್ಷದ ಅಭೂತಪೂರ್ವ ಗೆಲುವಿನಿಂದ ದೇಶದಲ್ಲಿ ಈಗಲೂ ಜಾತ್ಯತೀತತೆ ಇದೆ ಎಂಬುದು ಸಾಬೀತಾಗಿದೆ. ನಿಜಕ್ಕೂ ಇಂದಿನ ಫಲಿತಾಂಶ ಅನಿರೀಕ್ಷಿತವಾದದ್ದು ಎಂದು ಡಿಎಂಕೆ ನಾಯಕಿ ಕನಿಮೋಳಿ ಹೇಳಿದ್ದಾರೆ.
Advertisement