ನನ್ನ ಸೋಲಿಗೆ ಬುಖಾರಿ ಕಾರಣ: ಕಿರಣ್ ಬೇಡಿ ಆರೋಪ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹವರಿಗೇ ಮತನೀಡಿ ಎಂದು ಒಂದು ಗುಂಪಿಗೆ ಅಥವಾ ಒಂದು ಸಮುದಾಯಕ್ಕೆ ಸೂಚಿಸುವುದು ಸರಿಯಲ್ಲ...
ಬಿಜೆಪಿ ಮುಖಂಡೆ ಕಿರಣ್ ಬೇಡಿ ಮತ್ತು ಮುಸ್ಲಿಂ ಧಾರ್ಮಿಕ ಮುಖಂಡ ಬುಖಾರಿ (ಸಂಗ್ರಹ ಚಿತ್ರ)
ಬಿಜೆಪಿ ಮುಖಂಡೆ ಕಿರಣ್ ಬೇಡಿ ಮತ್ತು ಮುಸ್ಲಿಂ ಧಾರ್ಮಿಕ ಮುಖಂಡ ಬುಖಾರಿ (ಸಂಗ್ರಹ ಚಿತ್ರ)

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಕಾಣಲು ಶಾಹಿ ಇಮಾಮ್ ಬುಖಾರಿ ಅವರು ಹೊರಡಿಸಿದ್ದ ಫತ್ವಾ ಕಾರಣ ಎಂದು ಬಿಜೆಪಿ ಮುಖಂಡರಾದ ಕಿರಣ್ ಬೇಡಿ ಆರೋಪಿಸಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಕಿರಣ್ ಬೇಡಿ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹವರಿಗೇ ಮತನೀಡಿ ಎಂದು ಒಂದು ಗುಂಪಿಗೆ ಅಥವಾ ಒಂದು ಸಮುದಾಯಕ್ಕೆ ಸೂಚಿಸುವುದು ಸರಿಯಲ್ಲ. ಶಾಹಿ ಇಮಾಮ್ ಬುಖಾರಿ ಅವರಿಂದಲೇ ನಾನು ಚುನಾವಣೆಯಲ್ಲಿ ಸೋತೆ ಎಂದು ನಾನು ಹೇಳುತ್ತಿಲ್ಲ. ಆದರೆ ಧಾರ್ಮಿಕ ಮುಖಂಡರ ಹೇಳಿಕೆಗಳು ಒಂದು ನಿರ್ಧಿಷ್ಟ ಸಮುದಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶಾಹಿ ಇಮಾಮ್ ಬುಖಾರಿ ಅವರು ಮುಸ್ಲಿಮರೆಲ್ಲರೂ ಆಪ್ ಪಕ್ಷಕ್ಕೆ ಮತ ನೀಡಬೇಕು ಎಂದು ಹೇಳಿದ್ದರು. ಬುಖಾರಿ ಅವರು ಫತ್ವಾ ಹೊರಡಿಸಿದ್ದರಿಂದ ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರಬಹುದು. ಒಂದು ನಿರ್ಧಿಷ್ಟ ಸಮುದಾಯವನ್ನು ಕೇಂದ್ರೀಕರಿಸಿ ಅವರಿಗೆ ನಿರ್ದೇಶನ ನೀಡುವುದು ಅಥವಾ ಫತ್ವಾ ಹೊರಡಿಸುವುದು ಎಷ್ಟರ ಮಟ್ಟಿಗೆ ಸರಿ. ಇಂತಹ ಬೆಳವಣಿಗೆಗಳ ಕುರಿತಂತೆ ಚುನಾವಣಾ ಆಯೋಗ ಯಾವ ಕ್ರಮ ಕೈಗೊಂಡಿದೆ ಎಂದು ಬೇಡಿ ಪ್ರಶ್ನಿಸಿದರು. ಅಲ್ಲದೆ ನಾನು ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ ಎಂದು ಬೇಡಿ ಹೇಳಿದರು.

ದೆಹಲಿ ವಿಧಾನಸಭಾ ಚುನಾವಣಾ ಮತದಾನಕ್ಕೂ ಮೊದಲು ದೆಹಲಿಯ ಜಾಮಿಯಾ ಮಸೀದಿಯ ಮುಖ್ಯಸ್ಥ ಶಾಹಿ ಇಮಾಮ್ ಬುಖಾರಿ, ಆಪ್ ಪಕ್ಷಕ್ಕೆ ಮತ ನೀಡುವಂತೆ ಫತ್ವಾ ಹೊರಡಿಸಿದ್ದರು. ಆದರೆ ಬುಖಾರಿ ಅವರ ಬೆಂಬಲವನ್ನು ನಯವಾಗಿ ತಿರಸ್ಕರಿಸಿದ್ದ ಆಪ್ ಪಕ್ಷ, ಪ್ರಧಾನಿಯನ್ನು ಗೌರವಿಸದ ಬುಖಾರಿಯಂಥವರ ಬೆಂಬಲ ನಮಗೆ ಬೇಡ ಎಂದು ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com