ಅನ್ಯ ರಾಜ್ಯಗಳಿಗಿಂತ ಕರ್ನಾಟಕವೇ ಲೇಸು!

ಯಲಹಂಕ ವಾಯುನೆಲೆಯಲ್ಲಿ ಒಟ್ಟು 5 ಬ್ಲಾಕ್‍ಗಳನ್ನು ನಿರ್ಮಿಸಲಾಗಿದೆ. ಆದರೆ ಅಲ್ಲಿ ಭಾಗವಹಿಸಿರುವುದು ಕರ್ನಾಟಕ, ಆಂಧ್ರ ಪ್ರದೇಶ ತೆಲಂಗಾಣ..
ಯಲಹಂಕ ವಾಯುನೆಲೆ (ಸಂಗ್ರಹ ಚಿತ್ರ)
ಯಲಹಂಕ ವಾಯುನೆಲೆ (ಸಂಗ್ರಹ ಚಿತ್ರ)

ಬೆಂಗಳೂರು: ಏರೋ ಇಂಡಿಯಾ ಪ್ರದರ್ಶನವನ್ನು `ಮೇಕ್ ಇನ್ ಇಂಡಿಯಾ' ಯೋಜನೆಗೆ ವೇದಿಕೆಯನ್ನಾಗಿ ಬಳಸಿಕೊಳ್ಳಲು ಪ್ರಧಾನಿ ನರೆಂದ್ರ ಮೋದಿ ಹವಣಿಸುತ್ತಿದ್ದರೆ, ಕೇವಲ 5 ರಾಜ್ಯಗಳು ಮಾತ್ರ ಪ್ರಧಾನಿ ಕರೆಗೆ ಸ್ಪಂದಿಸಿವೆ. ಅಂತಹ ರಾಜ್ಯಗಳು ಕೂಡ ಕಾಟಾಚಾರಕ್ಕೆ ಭಾಗಿಯಾಗಿರುವುದು ಕಾಣಸಿಗುತ್ತದೆ. ಇರುವುದರಲ್ಲಿ ಕರ್ನಾಟಕವೇ ವಾಸಿ.

ಯಲಹಂಕ ವಾಯುನೆಲೆಯಲ್ಲಿ ಒಟ್ಟು 5 ಬ್ಲಾಕ್‍ಗಳನ್ನು ನಿರ್ಮಿಸಲಾಗಿದೆ. ಆದರೆ ಅಲ್ಲಿ ಭಾಗವಹಿಸಿರುವುದು ಕರ್ನಾಟಕ, ಆಂಧ್ರ ಪ್ರದೇಶ ತೆಲಂಗಾಣ, ಗುಜರಾತ್, ಛತ್ತೀಸ್ ಗಡ ಮಾತ್ರ. ಕರ್ನಾಟಕ ಹೊರತು ಪಡಿಸಿ ಮತ್ಯಾವ ಸರ್ಕಾರಗಳ ಮಳಿಗೆಗಳನ್ನು ನೋಡಿದರೂ ಬಂಡವಾಳ ಹೂಡುವುದು ಮುಂದಿನ ಮಾತು, ಆ ಕಡೆ ಮುಖ ಹಾಕಲೂ ಮನಸ್ಸು
ಬರುವುದಿಲ್ಲ. ಆಂಧ್ರದ ಮಳಿಗೆಯಲ್ಲಿ ನಾಮ ಫಲಕ ಹೊರತುಪಡಿಸಿ ಬೇರೇನೂ ಇಲ್ಲ.

ಯಾವುದೇ  ಯೋಜನೆಗಳ ಅನುಷ್ಠಾನದ ವಿಚಾರ ಬಂದಾಗ ಕೇಂದ್ರಕ್ಕಿಂತ ರಾಜ್ಯ ಸರ್ಕಾರಗಳ ಪಾತ್ರ ಬಹುದೊಡ್ಡದು. ಭೂಮಿ ಹಾಗೂ ಮೂಲ ಸೌಕರ್ಯ ನೀಡುವ ಜವಾಬ್ದಾರಿ ರಾಜ್ಯ ಸರ್ಕಾರಗಳನ್ನು ಇರಿಸಿಕೊಂಡು ಯಾವ ಪ್ರಧಾನಿ ಮೇಕ್ ಇನ್ ಇಂಡಿಯಾ ಯಶಸ್ವಿ ಮಾಡಲು ಸಾಧ್ಯ ಎಂದು ಅಲ್ಲಿ ಭಾಗವಸಿದ್ದ ಉದ್ಯಮಿಗಳೇ ಮಾತನಾಡಿಕೊಳ್ಳುತ್ತಿದ್ದರು.

ಅಧಿಕಾರಿಗಳ ಆರ್ಭಟ, ಸಚಿವರ ನಿರಾಸಕ್ತಿ
`ಗೇಟ್ ವೇ ಟು ಕರ್ನಾಟಕ' ಎಂಬ ಹೆಸರಿನಲ್ಲಿ ದೊಡ್ಡ ಪೆವಿಲಿಯನ್‍ನ್ನು ರಾಜ್ಯ ಸರ್ಕಾರ ನಿರ್ಮಿಸಿದ್ದು, ಚರ್ಚೆಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಏರೋಸೆಸ್ಸ್ ಉದ್ಯಮ ಕೇಂದ್ರೀಕರಿಸಿ ಪೆವಿಲಿಯನ್ ನಿರ್ಮಿಸಲಾಗಿದ್ದು, ಈ ಸಂಬಂಧದ ಎಲ್ಲ ನೀತಿಗಳನ್ನು  ಫ್ಲೆಕ್ಸ್ ಗಳ ಮೂಲಕ ಪ್ರಕಟಿಸಲಾಗಿದೆ. ಐಷಾರಾಮಿ ವಿನ್ಯಾಸ ಹೊಂದಿರುವ ಈ ಪೆವಿಲಿಯನ್ ಉಳಿದ ಸರ್ಕಾರಗಳ ಮಳಿಗೆಗಳಿಗಿಂತ ಹೆಚ್ಚು ಉದ್ಯಮಿಗಳನ್ನು ಆಕರ್ಷಿಸುತ್ತಿದೆ. ಜತೆಗೆ ಪ್ರತಿದಿನ 10ಕ್ಕೂ ಅ„ಕ ಪ್ರಮುಖ ಜಾಗತಿಕ ಸಂಸ್ಥೆಗಳ ಪ್ರಮುಖರೊಂದಿಗೆ ರಾಜ್ಯ ಸರ್ಕಾರದ ನಾನಾ ಅಧಥಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ.

ಟಾಟಾ, ಗೋದ್ರೇಜ್, ಮೈನಿ ಗ್ರೂಪ್, ಆ್ಯಕ್ಸಿಸ್‍ಕೇಡ್ಸ್, ರೋಲ್ಸ್ ರಾಯ್ಸ್, ಬೋಯಿಂಗ್, ಏರ್ ಬಸ್, ಯುಎಸ್‍ಐಬಿಸಿ ಸೇರಿದಂತೆ ಗುರುವಾರ 10ಕ್ಕೂ ಅಧಿಕ ಸಂಸ್ಥೆಗಳ ಜತೆ
ಮಾತುಕತೆ ನಡೆಸಲಾಗಿದೆ. ಶುಕ್ರವಾರ ಕೂಡ ಇಸ್ರೇಲ್, ಜರ್ಮನಿ ಸರ್ಕಾರಗಳ ಪ್ರತಿನಿಧಿಗಳು ಸೇರಿದಂತೆ ಪ್ರಮುಖ ಉದ್ಯಮಿಗಳೊಂದಿಗೆ ಅಧಿಕಾರಿಗಳು ಚರ್ಚೆ
ನಡೆಸಲಿದ್ದಾರೆ.

ಆದರೆ ಯಾವೊಬ್ಬ ಸಚಿವರೂ ಈ ಮಾತು ಕತೆಯಲ್ಲಿ ಭಾಗವಹಿಸುತ್ತಿಲ್ಲ. ಮುಖ್ಯಮಂತ್ರಿ ಸಹ ಆ ಕಡೆ ಸುಳಿದು ಸಿಇಒಗಳ ಜತೆ ಮಾತನಾಡುವ ಆಸಕ್ತಿ ತೋರಲಿಲ್ಲ. ಬುಧವಾರ
ಮಧ್ಯಾಹ್ನ ಸಭೆ ಆಯೋಜನೆಯಾಗಿದ್ದರೂ ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಅದರಿಂದ ತಪ್ಪಿಸಿಕೊಂಡಿದ್ದಾರೆ. ಕೊನೆಯ ಪಕ್ಷ ದಿನಕ್ಕೊಂದು ಸಮರ್ಥ ಸಚಿವರನ್ನು ಈ
ಕಾರ್ಯಕ್ಕೆ ನಿಯೋಜನೆಯನ್ನೂ ಮಾಡಿಲ್ಲ.

ಆಂಧ್ರ ಸಿಎಂ ಬಂದರು ಮಳಿಗೆ ನಾಸ್ತಿ!
ಇಂತಹ ವೇದಿಕೆಯನ್ನು ಯಾವತ್ತೂ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತಪ್ಪಿಸಿಕೊಳ್ಳುವುದಿಲ್ಲ. ಗುರುವಾರ ಬೆಳಗ್ಗೆಯೇ ಏರೋ ಇಂಡಿಯಾ ವೀಕ್ಷಿಸಲು ಆಗಮಿಸಿದ ನಾಯ್ಡು, ಉದ್ಯಮಿಗಳ ಜತೆ ಸರಣಿ ಮಾತುಕತೆ ನಡೆಸಿದರು.

ಆಂಧ್ರದಲ್ಲಿ ಬಂಡವಾಳ ಹೂಡುವಂತೆ ರಕ್ಷಣೆ ಹಾಗೂ ವಿಮಾನಯಾನ ಉದ್ಯಮಿಗಳಿಗೆ ಆಹ್ವಾನ ನೀಡಿದರು. ಆದರೆ ಅವರ ಸರ್ಕಾರವು ಮಾಡಿದ ವ್ಯವಸ್ಥೆ ನೋಡಿದರೆ ಯಾವೊಬ್ಬ ಉದ್ಯಮಿಯೂ ಹಣ ಹೂಡುವುದಿಲ್ಲ. ಆಂಧ್ರ ಸರ್ಕಾರದ ಈ ವ್ಯವಸ್ಥೆಯು ಚಂದ್ರಬಾಬು ನಾಯ್ಡು ಅವರ ಆಡಳಿತದ ಮೇಲೆಯೆ ಸಂದೇಹ ಬರುವ ಮಟ್ಟಿಗೆ ಇತ್ತು. ಆ ಸರ್ಕಾರಕ್ಕೆ ಮೀಸಲಾಗಿದ್ದ ಮಳಿಗೆಯಲ್ಲಿ ಚಹಾ ಮಾರಲಾಗುತ್ತಿತ್ತು. ಇನ್ನು ತಕ್ಕಮಟ್ಟಿಗೆ ಗುಜರಾತ್ ಸರ್ಕಾರದ ಮಳಿಗೆ ಆಕರ್ಷಣೀಯ ವಾಗಿಯೂ, ಅಲ್ಪ ಮಟ್ಟಿಗೆ ಉದ್ಯಮಿ ಗಳನ್ನು ಸೆಳೆಯಲು ಯಶಸ್ವಿಯಾಗಿತ್ತು. ತೆಲಂಗಾಣ ಹಾಗೂ ಛತ್ತೀಸಸ್‍ಗಡ ಸರ್ಕಾರದ ಮಳಿಗೆಗಳು ಕೇವಲ ಸೂಚನಾ ಫಲಕಗಳಿಂದ ತುಂಬಿಕೊಂಡಿದ್ದು, ನೆಪ ಮಾತ್ರಕ್ಕೆ ಮಳಿಗೆ ಹಾಕಿದಂತೆ ಭಾಸವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com