
ಹೈದರಾಬಾದ್: ಮಹಾಮಾರಿ ಹಂದಿ ಜ್ವರ ಮತ್ತೆ ವಕ್ಕರಿಸಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದ ಇಬ್ಬರಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.
2011ರಿಂದೀಚೆಗೆ ಭಾರತದಲ್ಲಿ ವ್ಯಾಪಕವಾಗಿ ಹರಡಿ ಭೀತಿ ಸೃಷ್ಟಿಸಿದ್ದ ಮಾಹಾಮಾರಿ ಹಂದಿಜ್ವರ ಮತ್ತೆ ವಕ್ಕರಿಸಿದ್ದು, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ತಲಾ ಒಬ್ಬರಲ್ಲಿ ಹಂದಿಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ. ಆಂಧ್ರಪ್ರದೇಶದ ಕಡಪ ಜಿಲ್ಲೆಯ ಓರ್ವ ಮಹಿಳೆ ಮತ್ತು ತೆಲಂಗಾಣದ ಓರ್ವ ಮಹಿಳೆಗೆ ಹಂದಿಜ್ವರವಿರುವುದು ವೈದ್ಯಕೀಯ ಪರೀಕ್ಷೆಗಳಿಂದ ತಿಳಿದುಬಂದಿದೆ.
ಕಳೆದ 2014ರಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ಭಾಗದಲ್ಲಿ ಸುಮಾರು 88 ಹಂದಿಜ್ವರ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಡಿಸೆಂಬರ್ ತಿಂಗಳೊಂದರಲ್ಲಿಯೇ 22 ಪ್ರಕರಣಗಳು ದಾಖಲಾಗಿದ್ದು, ಜ್ವರ ಪೀಡಿತ ಸುಮಾರು 10 ಮಂದಿ ಸಾವನ್ನಪ್ಪಿದ್ದರು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ವರ್ಷದ ಅಂತ್ಯದಲ್ಲಿ ಅಂದರೆ ಡಿಸೆಂಬರ್ 30ರಂದು ಮತ್ತೆ ಮೂರು ಹಂದಿಜ್ವರ ಪ್ರಕರಣ ಬೆಳಕಿಗೆ ಬಂದಿದ್ದು, ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸರ್ಕಾರಿ ಸ್ವಾಮ್ಯದ ಗಾಂಧಿ ಆಸ್ಪತ್ರೆ ಹಂದಿಜ್ವರ ವಿಭಾಗದ ಸಂಯೋಜಕರಾದ ಡಾ. ಕೆ ನರಸಿಂಹುಲು ಅವರು ತಿಳಿಸಿದ್ದಾರೆ.
'ಹಂದಿಜ್ವರ ಲಕ್ಷಣಗಳಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆಯಾದರೂ ಅದರಿಂದ ಆತಂಕಪಡುವ ಅಗತ್ಯವಿಲ್ಲ. ರಾಜ್ಯದಲ್ಲಿ ಹಂದಿ ಜ್ವರ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತೆಲಂಗಾಣ ಆರೋಗ್ಯ ಇಲಾಖೆಯ ನಿರ್ದೇಶಕ ಪಿ ಸಾಂಬಶಿವರಾವ್ ಅವರು ಹೇಳಿದ್ದಾರೆ.
ಒಟ್ಟಾರೆ ಎಬೋಲಾ ಮಹಾಮಾರಿ ಆತಂಕದ ನಡುವೆಯೇ ಹಂದಿಜ್ವರ ಮತ್ತೆ ವಕ್ಕರಿಸಿದ್ದು, ಜನತೆಯಲ್ಲಿನ ಆತಂಕವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
Advertisement