
ಕೊಚ್ಚಿ: ಮಾಜಿ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಮತ್ತು ಐಪಿಎಲ್ ಪಂದ್ಯಾವಳಿಗೆ ಸಂಬಂಧವಿದೆಯೇ? ಇದೆ ಎನ್ನುತ್ತವೆ ಹೊಸ ಸುಳಿವು.
ತರೂರ್ ಕುಟುಂಬದ ಆಪ್ತನಾಗಿರುವ ಸುನಿಲ್ ಟ್ರಕ್ರು ಎಂಬಾತ ದೆಹಲಿ ಪೊಲೀಸರಿಗೆ ನೀಡಿದ ಮಾಹಿತಿಯಲ್ಲಿ ಈ ಅಂಶ ಉಲ್ಲೇಖಿಸಿದ್ದಾನೆ.
ಸುನಂದಾ ಆಗಾಗ ಐಪಿಎಲ್ ಬಗ್ಗೆ ಮಾತನಾಡುತ್ತಿದ್ದರು. ಇದರ ಜತಗೆ ಸುನಂದಾರ ಆಪ್ತ ಸ್ನೇಹಿತೆ ನಳಿನಿ ಸಿಂಗ್ ಪೊಲೀಸರಿಗೆ ನೀಡಿದ್ದ ಹೇಳಿಕೆಯಲ್ಲಿ ಸುನಂದಾ ಐಪಿಎಲ್ ಪಂದ್ಯಗಳ ಬಗ್ಗೆ ಮಾತನಾಡುತ್ತಿದ್ದ ಬಗ್ಗೆ ಉಲ್ಲೇಖಿಸಿದ್ದರು. ಹೀಗಾಗಿ ಸುನಿಲ್ ನನ್ನು ಮತ್ತೆ ದೆಹಲಿ ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಹೊಸ ಮಹಿಳೆ ಇದ್ದಳು?
ಈ ನಡುವೆ ತರೂರ್ ಮನೆ ಕೆಲಸದಾಳು ನಾರಾಯಣ್ ಮತ್ತೊಂದು ಪ್ರಮುಖ ಅಂಶ ಉಲ್ಲೇಖಿಸಿದ್ದಾನೆ. ದಂಪತಿ ಆಗಾಗ ಜಗಳ ಮಾಡುತ್ತಿದ್ದರು. ದಂಪತಿ ತಮ್ಮ ವಾಕ್ಸಮರದಲ್ಲಿ 'ಕ್ಯಾಟಿ' ಎಂಬ ಮಹಿಳೆ ಹೆಸರು ಪ್ರಸ್ತಾಪವಾಗುತ್ತಿತ್ತು ಎಂದಿದ್ದಾನೆ. 2013ರ ಡಿಸೆಬಂರ್‌ನಲ್ಲಿ ಜಗಳವೊಂದರ ಸಂದರ್ಭದಲ್ಲಿ ತರೂರ್ ಕಾಲಿಗೆ ಗಾಯವಾಗಿತ್ತು. ಹೀಗಾಗಿ ಪಾಕಿಸ್ತಾನ ಪತ್ರಕರ್ತೆ ಮೆಹೆರ್ ತರಾರ್ ಅಲ್ಲದೆ ಮತ್ತೊಬ್ಬ ಮಹಿಳೆಯೂ ತರೂರ್ ಜೀವನದಲ್ಲಿದ್ದರೆ ಎಂಬ ಪ್ರಶ್ನೆ ಈಗ ಒಡಮೂಡಿದೆ.
ಸದ್ಯ ವಿಚಾರಣೆ ಇಲ್ಲ
ಸುನಂದಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಶಶಿ ತರೂರ್‌ರನ್ನು ವಿಚಾರಣೆಗೆ ಒಳಪಡಿಸುವುದಿಲ್ಲ. ಅವರ ಬದಲಾಗಿ ಮಾಜಿ ಸಚಿವರ ಆಪ್ತರು ಮತ್ತು ಸಹಾಯಕರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದಿದ್ದಾರೆ ದೆಹಲಿ ಪೊಲೀಸರು. ಕೊಲೆ ಪ್ರಕರಣಕ್ಕೆ ಮತ್ತು ಐಪಿಎಲ್ ಪಂದ್ಯಕ್ಕೆ ಸಂಬಂಧ ಇದೆಯೇ ಎಂಬ ಬಗ್ಗೆ ಇನ್ನಷ್ಟೇ ತನಿಖೆ ನಡೆಸಬೇಕಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೈದ್ಯ ವರದಿಯೇ ಕಾರಣ
ಅನುಮಾನಾಸ್ಪದವಾಗಿ ಸುನಂದಾ ತರೂರ್ ಸಾವನ್ನಪ್ಪಿದ ವರ್ಷದ ಬಳಿಕ ದೆಹಲಿ ಪೊಲೀಸರು ಕೊಲೆ ಮೊಕದ್ದಮೆ ದಾಖಲಿಸಿದ್ದಾರೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ತಜ್ಞ ವೈದ್ಯರು ಸಲ್ಲಿಸಿದ ವರದಿ ಆಧಾರದ ಮೇಲೆಯೇ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಹೀಗೆಂದು ದೆಹಲಿ ಪೊಲೀಸ್ ಇಲಾಖೆಯಲ್ಲಿನ ಉನ್ನತ ಮೂಲಗಳ ಅಂಬೋಣ. ಸುನಂದಾಗೆ ವಿಷ ಪ್ರಾಶನ ಮಾಡಲಾಗಿದೆಯೆಂದೇ ವೈದ್ಯಕೀಯ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಕಾಂಗ್ರೆಸ್ ಸಂಸದ ತರೂರ್ ಪತ್ನಿಯ ದೇಹದಲ್ಲಿ ಹಲವಾರು ಗಾಯದ ಗುರುತುಗಳು ಇದ್ದವು. ಎಲ್ಲದಕ್ಕಿಂತ ಹೆಚ್ಚಾಗಿ ಅವರ ಕೈಯಲ್ಲಿ ಕಚ್ಚಿದ ಗುರುತು ಇದ್ದದ್ದು ಪತ್ತೆಯಾಗಿದೆ. ಇದಲ್ಲದೆ ಪುಷ್ಕರ್ ತಂಗಿದ್ದ ಕೊಠಡಿಯಲ್ಲಿ ಗಾಜಿನ ಚೂರುಗಳು ಕಂಡುಬಂದಿದ್ದವು.
ಇನ್ನೇನೂ ಇಲ್ಲ
ಪತ್ನಿ ಸಾವಿನ ಬಗ್ಗೆ ಹೇಳಬೇಕಾದ ಅಂಶಗಳನ್ನೆಲ್ಲ ಶುಕ್ರವಾರ ಗುರುವಾಯೂರಿನಲ್ಲಿ ತಿಳಿಸಿದ್ದೇನೆ. ಅದಕ್ಕಿಂತ ಹೆಚ್ಚಿಗೆ ಹೇಳುವುದಕ್ಕೆ ಏನೂ ಇಲ್ಲ ಎಂದಿದ್ದಾರೆ ಮಾಜಿ ಸಚಿವ ಶಶಿತರೂರ್. ಕೊಚ್ಚಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು ಪತ್ರಕರ್ತರ ಜತೆಗೆ ಮಾತನಾಡಿ, ನೀವು ಕೇಳಿದ್ದನ್ನೇ ಕೇಳಿ ಸಮಯ ವ್ಯರ್ಥ ಮಾಡುತ್ತಿದ್ದೀರಿ ಎಂದಿದ್ದಾರೆ. ಇದಕ್ಕಿಂತ ಹೆಚ್ಚಿನ ಮಾಹಿತಿ ಬೇಕಿದ್ದರೆ ತನಿಖೆ ನಡೆಸುತ್ತಿರುವ ಪೊಲೀಸರನ್ನೇ ಕೇಳಿ ಎಂದರು.
Advertisement