ಒಬಾಮ ರಕ್ಷಣೆ ಕಂಡಲ್ಲಿ ಗುಂಡು

ವಿಶ್ವದ ದೊಡ್ಡಣ್ಣನನ್ನು ಬರ ಮಾಡಿಕೊಳ್ಳಲು ಸಿದ್ಧವಾಗಿರುವ ದೆಹಲಿಯಲ್ಲೀಗ ಎಲ್ಲೆಲ್ಲೂ ಶಸ್ತ್ರಧಾರಿಗಳೇ...
ಒಬಾಮ ರಕ್ಷಣೆ ಕಂಡಲ್ಲಿ ಗುಂಡು

ನವದೆಹಲಿ: ವಿಶ್ವದ ದೊಡ್ಡಣ್ಣನನ್ನು ಬರ ಮಾಡಿಕೊಳ್ಳಲು ಸಿದ್ಧವಾಗಿರುವ ದೆಹಲಿಯಲ್ಲೀಗ ಎಲ್ಲೆಲ್ಲೂ ಶಸ್ತ್ರಧಾರಿಗಳೇ!

ಭಾರತದ ರಕ್ಷಣಾ ಪಡೆ ಜತೆಗೆ ಅಮೆರಿಕದಿಂದ ಬಂದಿರುವ ಒಬಾಮ ರಕ್ಷಕರೂ ಕಾರ್ಯಾಚರಣೆಗೆ ಇಳಿದಿದ್ದಾರೆ. ದೆಹಲಿಯ ಅಯಕಟ್ಟಿನ ಪ್ರದೇಶಗಳಲ್ಲಿ ಈಗ ಶಸ್ತ್ರಧಾರಿಗಳಿಂದ ಕಟ್ಟೆಚ್ಚರ ಆರಂಭವಾಗಿದೆ. 3 ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಮೇಲೆ ಭಯೋತ್ಪಾದರಕರ ದಾಳಿ ಬೆದರಿಕೆ ಹಿನ್ನೆಲೆಯಲ್ಲಿ ಇಡೀ ದೆಹಲಿಯೇ ರಕ್ಷಣೆಯ ಕವಚ ತೊಟ್ಟಿದೆ. ರಾ, ಐಬಿ, ಐಟಿಬಿಎಫ್‌ನ ಪ್ರಮುಖರು ರಕ್ಷಣೆಯ ಮೇಲ್ವಿಚಾರಣೆ ಹೊತ್ತಿದ್ದಾರೆ.

ಕಂಡಲ್ಲಿ ಗುಂಡು
ಅಯಕಟ್ಟನ ಪ್ರದೇಶಗಳಲ್ಲಿ ಅಮೆರಿಕದ ಯುಎಸ್ ಸಿಕ್ರೆಟ್ ಸರ್ವೀಸ್ ಏಜೆಂಟ್‌ಗಳನ್ನು ನಿಯೋಜಿಸಲಾಗಿದೆ. ಅವರೊಂದಿಗೆ ಭಾರತದ ರಾಷ್ಟ್ರೀಯ ಸುರಕ್ಷತಾ ದಳದ ಗುರಿಕಾರರು ಜತೆಗಿರುತ್ತಾರೆ. ಭಯೋತ್ಪಾದಕರು, ದಾಳಿಕೋರರು ಎರಗುವ ಮುನ್ನವೇ ಗುಂಡು ಹಾರಿಸಲು ಸಿದ್ಧರಾಗಿದ್ದಾರೆ ಈ ಗುರಿಕಾರರು.

ಜ.25ಕ್ಕೆ ಆಗಮಿಸಿ 27ರಂದು ಹಿಂದಿರುಗುವವರೆಗೂ ಕಣ್ಣಲ್ಲಿ ಕಣ್ಣಿಟ್ಟು ಕಾಯಲು 60,000 ಸಿಬ್ಬಂದಿ ನಿಯೋಜಿಸಲಾಗಿದೆ. 15,000 ಸಿಸಿ ಕ್ಯಾಮೆರಾಗಳು, ಆ ಕ್ಯಾಮೆರಾ ದೃಶ್ಯಗಳ ಮೇಲೆ ನಿಗಾ ಇಡಲು ಸಿಬ್ಬಂದಿ, ರಕ್ಷಣಾ ನಿರತರಿಗೆ ಸಹಾಯ ಒದಗಿಸುವ ಸಿಬ್ಬಂದಿ ಸೇರಿ ದೊಡ್ಡಣ್ಣನ ರಕ್ಷಣೆಗೆ ನಿಂತವರ ಸಂಖ್ಯೆ ಲಕ್ಷದಾಟುತ್ತದೆ.

ಈ ಸಿಬ್ಬಂದಿ ಜತೆಗೆ ಪ್ರಮುಖ ಅಯಕಟ್ಟಿನ ಪ್ರದೇಶಗಳಲ್ಲಿ ಅಮೆರಿಕದ ರಕ್ಷಣಾ ಪಡೆ ಕಾರ್ಯಾಚರಣೆಗೆ ಇಳಿದಿದೆ. ಯುಎಸ್ ಸಿಕ್ರೆಟ್ ಸರ್ವೀಸ್ ಸಿಬ್ಬಂದಿ ಈಗಾಗಲೇ ಒಬಾಮ ಸಂಚರಿಸುವ ರಾಜಪಥ, ದೆಹಲಿಯ ರಸ್ತೆಗಳು, ಉಳಿದುಕೊಳ್ಳಲಿರುವ ಹೋಟೆಲ್, ದೆಹಲಿ-ಆಗ್ರಾ ಹೆದ್ದಾರಿಯನ್ನು ಇಂಚಿಂಚು ಪರೀಕ್ಷಿಸಿದ್ದಾರೆ. ಒಬಾಮ ಆತಿಥ್ಯ ನೀಡುವ ರಾಷ್ಟ್ರಪತಿ ಭವನ, ಗಣರಾಜ್ಯೋತ್ಸವ ಪಥಸಂಚಲನ ವೀಕ್ಷಿಸುವ ರಾಜಪಥ ಮತ್ತು ವಾಸ್ತವ್ಯ ಹೂಡಿರುವ ಮೌರ್ಯ ಶೆರ್ಟಾನ್ ಹೋಟೆಲ್ ಸುತ್ತಮುತ್ತಲ ಪ್ರದೇಶದಲ್ಲಿ 3 ದಿನಗಳ ಸಂಚಾರ ಬಂದ್ ಆಗಲಿದೆ. ರಕ್ಷಣಾ ನಿಗಾ ಕಾರ್ಯಕ್ಕಾಗಿ ಆಗಿಂದಾಗ್ಗೆ ಮೊಬೈಲ್ ಸಂಪರ್ಕವೂ ಸ್ಥಗಿತಗೊಳ್ಳಲಿದೆ.

ಸ್ವಾಟ್ ನೆರವು

ಒಬಾಮ ರಕ್ಷಣೆಗೆ ನಿಂತಿರುವ ಅಮೆರಿಕ ಮತ್ತು ಭಾರತದ ರಕ್ಷಣಾ ತಂಡಕ್ಕೆ ನೆರವು ನೀಡುತ್ತಿರುವುದ ಸ್ವಾಟ್ ತಂಡ. ದೆಹಲಿ ಪೊಲೀಸ್‌ನ ಅಂಗವಾಗಿರುವ ಸ್ವಾಟ್ ತಂಡ ಅತ್ಯುನ್ನತ ತರಬೇತಿ ಪಡೆದ ಕಮಾಂಡೋಗಳ ಪಡೆ. ಇಸ್ರೇಲ್‌ನ ಕೌಂಟರ್ ಟೆರರ್ ಅಂಡ್ ಇಂಟೆಲಿಜೆನ್ಸ್ ವಿಭಾಗವಾದ ಮೊಸಾದ್ ಕಮಾಂಡೊಗಳಿಂದ ಶತ್ರು ಸಂಹಾರ ತಂತ್ರಗಳನ್ನು ರೂಢಿಸಿಕೊಂಡಿರುವ ಸ್ವಾಟ್(ಸ್ಪೆಷಲ್ ವೆಪನ್ ಅಂಡ್ ಟ್ಯಾಕ್ಟಿಕ್ಸ್) ದೆಹಲಿಯ ಇಂಚಿಂಚನ್ನೂ ಅರಿತಿರುವ ತಂಡ. ಯಾವುದೇ ಉಗ್ರ ಚಟುವಟಿಕೆಗಳು ವಿವಿಐಪಿಗಳ ಅಪಹರಣ ಆದರೂ 10 ನಿಮಿಷಗಳಲ್ಲಿ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸುವ ನೈಪುಣ್ಯ ಪಡೆದಿದೆ. ಮುಂಬೈ ದಾಳಿ ನಡೆದ ನಂತರ ಉಗ್ರಗಾಮಿ ಚಟುವಟಿಕೆ ಹತ್ತಿಕ್ಕುವ ಸಲುವಾಗಿ ರೂಪುಗೊಂಡ ಸ್ವಾಟ್, ಕೇಂದ್ರ ಗೃಹ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಭವನೀಯ ಉಗ್ರ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿರುವ ಸ್ವಾಟ್ ಈಗ ಒಬಾಮ ರಕ್ಷಣೆಗೆ ನೆರವಾಗುತ್ತಿದೆ.

ಉಪಗ್ರಹದ ಮೂಲಕ ನಿಗಾ
ರಾಜಪಥದಲ್ಲಿ ಗಣರಾಜ್ಯೋತ್ಸವ ಪಥಸಂಚಲನ ಸಾಗುವಾಗ ಒಬಾಮ ರಕ್ಷಣೆಗಾಗಿ ಅಮೆರಿಕದ ಉಪಗ್ರಹಗಳು ನಿಗಾ ಇಡಲಿವೆ. ಜತೆಗೆ ಒಬಾಮ ಹಾದು ಹೋಗುವಲ್ಲೆಲ್ಲ ಉಪಗ್ರಹಗಳು ಕ್ಷಕಿರಣ ಬೀರಲಿವೆ. ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡ ಮುಖ್ಯ ಅತಿಥಿಯೊಬ್ಬರ ರಕ್ಷಣೆಗಾಗಿ ನೇರ ಉಪಗ್ರಹ ನಿಗಾ ರಕ್ಷಣೆ ಒದಗಿಸುತ್ತಿರುವುದು ಇದೇ ಮೊದಲು. ಇದಷ್ಟೆ ಅಲ್ಲದೇ ಭಾರತವೂ ಇದೇ ಮೊದಲ ಬಾರಿಗೆ ಏರ್‌ಬೋರ್ನ ಅರ್ಲಿ ವಾರ್ನಿಂಗ್ ಅಂಡ್ ಕಂಟ್ರೋಲ್ ಸಿಸ್ಟಮ್ (ಎಇಡಬ್ಲ್ಯೂ ಎಸಿಎಸ್) ಬಳಕೆ ಮಾಡುತ್ತಿದೆ. ರೇಡಾರ್ ಹೊಂದಿರುವ ಈ ವ್ಯವಸ್ಥೆಯು ಹಾರಾಟ ನಿಷಿದ್ಧ ಪ್ರದೇಶಕ್ಕೆ ಹಾದೂ ಬರುವ ಯಾವುದೇ ವಿಮಾನವನ್ನು ಮುಂಚಿತವಾಗಿಯೇ ಪತ್ತೆ ಹಚ್ಚುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com