
ನವದೆಹಲಿ: ಭಾರತ ಮತ್ತು ಅಮೆರಿಗ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಮಾತುಕತೆಗಳು ಯಶಸ್ವಿಯಾಗಿದ್ದು, ಹಲವಾರು ಮಹತ್ವದ ಒಪ್ಪಂದಗಳಿಗೆ ಉಭಯ ರಾಷ್ಟ್ರದ ನಾಯಕರು ಸಹಿ ಹಾಕಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಸುಜಾತ ಸಿಂಗ್ ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ಭಾರತ ಮತ್ತು ಅಮೆರಿಕ ವಿದೇಶಾಂಗ ಅಧಿಕಾರಿಗಳು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಅಮೆರಿಕ-ಭಾರತ ನಡುವಣ ಯಾವ ಯಾವ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂಬ ಮಾಹಿತಿಯನ್ನು ನೀಡಿದ ಸುಜಾತ ಸಿಂಗ್ ಅವರು, ನಾಗರಿಕ ಪರಮಾಣು ಒಪ್ಪಂದಕ್ಕೆ ಅಮೆರಿಕ ಸಹಿ ಹಾಕಿದೆ. ನಾಗರಿಕ ಪರಮಾಣು ಅನುಷ್ಠಾನಕ್ಕೆ ಅಮೆರಿಕ ಸಮ್ಮತಿ ನೀಡಿದ್ದು, ಪರಮಾಣು ಘಟಕಗಳ ಮೇಲೆ ನಿಗಾ ವಹಿಸುವ ಷರತ್ತಿನಿಂದ ಅಮೆರಿಕ ಹಿಂದೆ ಸರಿದಿದೆ. ಹೀಗಾಗಿ 6 ವರ್ಷಗಳ ಪರಮಾಣು ಒಪ್ಪಂದ ಅನುಷ್ಠಾನಕ್ಕೆ ಅಡ್ಡಿ ನಿವಾರಣೆಯಾದಂತಾಗಿದೆ ಎಂದರು.
ಭಾರತದಲ್ಲಿ ಮೂರು ಸ್ಮಾರ್ಟ್ ಸಿಟಿಗಳ ನಿರ್ಮಾಣ ಯೋಜನೆಗೆ ಅಮೆರಿಕ ಸಹಿ ಹಾಕಿದ್ದು, ಅಮೆರಿಕ ಸಹಯೋಗದಲ್ಲಿ ರಾಜಸ್ಥಾನದ ಅಜ್ಮೇರ್, ಉತ್ತರಪ್ರದೇಶದ ಅಲಹಾಬಾದ್, ಆಂಧ್ರದ ವಿಶಾಖಪಟ್ಟಣಂನಲ್ಲಿ ಮೂರು ಸ್ಮಾರ್ಟ್ ಸಿಟಿಗಳು ನಿರ್ಮಾಣಗೊಳ್ಳಲಿದೆ ಎಂದರು.
ಜೆಟ್ ಎಂಜಿನ್ ಉತ್ಪಾದನೆ, ಡಿಜಿಟಲ್ ಇಂಡಿಯಾ ಯೋಜನೆ ಹಾಗೂ ಸೌರಶಕ್ತಿಗೆ ಉತ್ಪಾದನೆಗೆ ಅಮೆರಿಕ ಆರ್ಥಿಕ ನೆರವು ನೀಡಲಿದೆ. ಜತೆಗೆ ರಕ್ಷಣಾ ಕ್ಷೇತ್ರದಲ್ಲಿ 10 ವರ್ಷಗಳ ಒಪ್ಪಂದಕ್ಕೆ ಅಮೆರಿಕ ಸಹಿ ಹಾಕಿದೆ ಎಂದರು.
Advertisement