ಭಾರತ ಅಮೆರಿಕಾದ 'ಬೆಸ್ಟ್ ಫ್ರೆಂಡ್‌': ಒಬಾಮ

ನಮಸ್ತೆ ಎನ್ನುವ ಮೂಲಕ ತಮ್ಮ ಭಾಷಣ ಆರಂಭಿಸಿದ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಭಾರತ ಅಮೆರಿಕಾದ ಬೆಸ್ಟ್ ಫ್ರೆಂಡ್ ಎಂದು ಹೇಳಿದ್ದಾರೆ...
ಬರಾಕ್ ಒಬಾಮಾ
ಬರಾಕ್ ಒಬಾಮಾ

ನವದೆಹಲಿ: ನಮಸ್ತೆ ಎನ್ನುವ ಮೂಲಕ ತಮ್ಮ ಭಾಷಣ ಆರಂಭಿಸಿದ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಭಾರತ ಅಮೆರಿಕಾದ ಬೆಸ್ಟ್ ಫ್ರೆಂಡ್ ಎಂದು ಹೇಳಿದ್ದಾರೆ.

ಮಂಗಳವಾರ ನವದೆಹಲಿಯಲ್ಲಿರುವ ಸಿರಿಪೋರ್ಟ್‌ನಲ್ಲಿ ವಿಶೇಷ ಆಮಂತ್ರಿತರನ್ನುದ್ದೇಶಿಸಿ ಭಾಷಣ ಮಾಡಿದ ಬರಾಕ್ ಒಬಾಮ, ನನ್ನ ಈ ಭೇಟಿಯಿಂದ ಭಾರತ ಮತ್ತು ಅಮೆರಿಕದ ಸ್ನೇಹ ಮತ್ತಷ್ಟು ಬಲಗೊಳ್ಳಲಿದೆ. ಗಣರಾಜ್ಯೋತ್ಸವಕ್ಕೆ ಬಂದ ಮೊದಲ ಅಮೆರಿಕ ಅಧ್ಯಕ್ಷ ನಾನು. ನನ್ನ ಈ ಭೇಟಿ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಗೆ ನಾನು ಮೊದಲ ಪ್ರಾಶಸ್ತ್ಯ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಭಾರತೀಯರು ಅಮೆರಿಕವನ್ನು ಮತ್ತಷ್ಟು ಬಲಗೊಳಿಸಿದ್ದಾರೆ. ಅನಿವಾಸಿ ಭಾರತೀಯರು ಅಮೆರಿಕದ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ. ಅಮೆರಿಕದ ಅಭಿವೃದ್ಧಿಯಲ್ಲಿ ಭಾರತದ ಪಾತ್ರವೂ ಇದೆ. ಭಾರತ ಅಭಿವೃದ್ಧಿಯತ್ತ ಸಾಗುತ್ತಿದ್ದು, ಭಾರತದತ್ತ ನೋಡಿದಾಗ ನಮ್ಮದೇ ಪ್ರತಿಬಿಂಬ ಕಾಣುತ್ತದೆ. ಇನ್ನು ಮುಂದೆ ಉಭಯ ರಾಷ್ಟ್ರಗಳಲ್ಲಿ ಇನ್ನಷ್ಟು ಉದ್ಯೋಗ ಅವಕಾಶ ಹೆಚ್ಚಳವಾಗಲಿದೆ ಎಂದ ಅವರು, ಈ ನಿಟ್ಟಿನಲ್ಲಿ ಇಡೀ ಜಗತ್ತಿಗೆ ಭಾರತ ದಾರಿ ದೀಪವಾಗಲಿದೆ ಎಂದಿದ್ದಾರೆ.

ಜಾಗತಿಕ ತಾಪಮಾನ ಇಂದಿನ ಅತಿ ದೊಡ್ಡ ಸಮಸ್ಯೆ. ಜಾಗತಿಕ ತಾಪಮಾನ ಇಳಿಕೆ ನಮ್ಮ ಮುಂದಿರುವ ದೊಡ್ಡ ಸವಾಲು. ಹಿಮಾಲಯದಲ್ಲಿ ಹಿಮಗಡ್ಡೆಗಳು ಕರಗುತ್ತಿವೆ, ಮಾನ್ಸೂನ್ ಬದಲಾಗುತ್ತಿದೆ. ಇದು ನಮಗೆಲ್ಲಾ ಆತಂಕಕಾರಿ ವಿಷಯವಾಗಿದೆ. ಪರಿಸರ ಸಮತೋಲನಕ್ಕಾಗಿ ಭಾರತ ಮತ್ತು ಅಮೆರಿಕಾ ಜಂಟಿಯಾಗಿ ದುಡಿಯಬೇಕಿದೆ. ಜಾಗತಿಕ ತಾಪಮಾನ ಕಡಿಮೆ ಮಾಡಬೇಕಿದೆ ಎಂದು ಅವರು ತಿಳಿಸಿದ್ದಾರೆ.

ವಿವೇಕಾನಂದ, ಮಹಾತ್ಮ ಗಾಂಧೀಜಿ ಅವರನ್ನು ಸ್ಮರಿಸಿದ ಒಬಾಮ ಅವರು, ವಿವೇಕಾನಂದರು ಅಮೆರಿಕನ್ನರು ನನ್ನ ಸೋದರ, ಸೋದರಿಯರು ಎಂದಿದ್ರು, ಈಗ ನಾನು ಹೇಳುತ್ತೇನೆ ಭಾರತ ಅಮೆರಿಕ ಸೋದರ ಸೋದರಿಯರು. ಈ ಸಂಬಂಧ ಗಟ್ಟಿಗೊಳಿಸಿ ಯುವ ಪೀಳಿಗೆ ಅಭಿವೃದ್ಧಿಗೆ ದುಡಿಯೋಣ ಎಂದು ಹೇಳಿದ್ದಾರೆ.

ವಿವೇಕಾನಂದ, ಗಾಂಧೀಜಿ, ಮಾರ್ಟಿನ್ ಲೂಥರ್ ನನಗೆ ಆದರ್ಶವಾದಿಗಳು. ಅವರು ನಡೆದಂತ ಹಾದಿಯಲ್ಲಿ ನಾವು ನಡೆಯಬೇಕು. ಬಡತನ ನಿವಾರಣೆಗೆ ಯುವ ಜನಾಂಗ ಮುಂದಾಗಬೇಕು ಎಂದ ಅವರು  ಭೇಟಿ ಬಚಾವೋ, ಭೇಟಿ ಪಡಾವೋ ಯೋಜನೆಯನ್ನು ಪ್ರಶಂಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com