
ನವದೆಹಲಿ: ರಾಷ್ಟ್ರೀಯ ಹೆದ್ದಾರಿ 212ರಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡಬೇಕೆಂಬ ಕೇರಳ ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಎಂಟು ವಾರ ಕಾಲ ಮುಂದೂಡಿದೆ.
ಶುಕ್ರವಾರ ಮುಖ್ಯನ್ಯಾಯಮೂರ್ತಿ ಎಚ್.ಎಲ್. ದತ್ತು ಅವರ ಪೀಠದ ಮುಂದೆ ವಿಚಾರಣೆಗೆ ಬಂತು. ಕೇರಳ ಸರ್ಕಾರದ ಪರವಾದ ಮಂಡಿಸಿದ ವಕೀಲ ಗೋಪಾಲ ಸುಬ್ರಮಣ್ಯಂ ಅವರು ರಾತ್ರಿ ವೇಳೆ ಸಂಚಾ ರಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಕರ್ನಾಟಕ ಮತ್ತು ಕೇರಳ ನಡುವೆ ಸಂಚರಿಸಲು ಇದೊಂದೇ ಮಾರ್ಗ. ಈ ಮಾರ್ಗದಲ್ಲಿ ರಾತ್ರಿ ವೇಳೆ ಸಂಚಾರ ನಿರ್ಬಂಧಿಸುವುದರಿಂದ ಕೇರಳದಿಂದ ಕರ್ನಾಟಕಕ್ಕೆ ತೆರಳುವವರಿಗೆ ಮತ್ತು ಕರ್ನಾಟಕದಿಂದ ಕೇರಳಕ್ಕೆ ತೆರಳುವವರಿಗೆ ಅನನುಕೂಲವಾಗುತ್ತಿದೆ. ಆದ್ದರಿಂದ ಸಂಚಾರ ನಿರ್ಬಂಧ ತೆರವುಗೊಳಿಸಲು ಕರ್ನಾಟಕ ಸರ್ಕಾರಕ್ಕೆ ಸೂಚಿಸಬೇಕು ಎಂದು ಮನವಿ ಮಾಡಿದರು. ವಾದ ಆಲಿಸಿದ ಮುಖ್ಯನ್ಯಾಯಮೂರ್ತಿ, ವಿಚಾರಣೆಯನ್ನು ಎಂಟುವಾರ ಕಾಲ ಮುಂದೂಡಿದರು.
ಕರ್ನಾಟಕ ಹೈಕೋರ್ಟ್ 2010 ಮಾರ್ಚ್ 9ರಂದು ನೀಡಿದ ಆದೇಶದಂತೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ಸಂಚಾರ ದಿಂದ ಮರಗಳ್ಳತನ, ಕಾಡು ಪ್ರಾಣಿಗಳ ಬೇಟೆ ಮತ್ತು ರಾತ್ರಿ ವೇಳೆ ಕಾಡುಪ್ರಾಣಿಗಳು ಭಾರಿ ವಾಹನಗಳಿಗೆ ಸಿಕ್ಕಿ ಸಾವೀಗೀಡಾಗುತ್ತಿದ್ದನ್ನು ತಪ್ಪಿ ಸಲು ರಾಜ್ಯ ಸರ್ಕಾರ ಈ ಕ್ರಮ ಅನುಸರಿಸಿತ್ತು.
ಕೇರಳ ಮುಖ್ಯಮಂತ್ರಿ ಊಮನ್ ಚಾಂಡಿ ಅವರು ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರಾತ್ರಿ ವೇಳೆ ಸಂಚಾರ ತೆರವುಗೊಳಿಸುವುದಕ್ಕೆ ಮನವಿ ಮಾಡಿದ್ದರು. ಆದರೆ, ಅರಣ್ಯ ಸಂರಕ್ಷಣೆ ಮತ್ತು ಕಾಡು ಪ್ರಾಣಿಗಳ ರಕ್ಷಣೆಗಾಗಿ ರಾತ್ರಿ ಸಂಚಾರ ನಿರ್ಬಂಧ ಸಡಿಲಿಸುವುದಿಲ್ಲ ಎಂದು ಕರ್ನಾಟಕ ಸ್ಪಷ್ಟ ಪಡಿಸಿತ್ತು. ಕೇರಳ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
Advertisement