

ಬೆಂಗಳೂರು: ಗಂಡನಾದ ರಾಮಚಂದ್ರ ಭಟ್ ಹಾಗೂ ಮೈದುನ ಮಾರುತಿ ಭಟ್ ಅಲಿಯಾಸ್ ಗೇರು ಸೊಪ್ಪದ ಮಾರುತಿ ಗುರೂಜಿ ತನ್ನ ಮೇಲೆ ದೈಹಿಕ, ಮಾನಸಿಕ ಹಲ್ಲೆ ನಡೆಸಿರುವುದಲ್ಲದೆ ಲೈಂಗಿಕ ಕಿರುಕುಳ ನೀಡಿ ಪ್ರಾಣ ಬೆದರಿಕೆ ಹಾಕಿರುವುದಾಗಿ ನೊಂದ ಮಹಿಳೆ ನಯನಾ ಭಟ್ ಆರೋಪಿಸಿದ್ದಾರೆ.
ಹೊನ್ನಾವರ ಪೊಲೀಸ್ ಠಾಣೆ ಹಾಗೂ ಬೆಂಗಳೂರು ಪೊಲೀಸ್ ಮಹಾ ನಿರ್ದೇಶಕರಿಗೆ ಈ ಸಂಬಂಧ ದೂರು ನೀಡಿದ್ದು ನ್ಯಾಯ ಹಾಗೂ ರಕ್ಷಣೆಗಾಗಿ ಮೊರೆ ಹೋಗಿರುವುದಾಗಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಲ್ಕೈದು ವರ್ಷಗಳ ಹಿಂದೆ ಅತ್ತೆ 1.13 ಎಕರೆ ಜಾಗವನ್ನು ಖರೀದಿಸಿ ನನ್ನ ಹೆಸರಿಗೆ ನೋಂದಣಿ ಮಾಡಿಸಿಕೊಟ್ಟರು. ಇದಕ್ಕೆ ಮೈದುನ ಮಾರುತಿ ಭಟ್ ವಿರೋಧ ಇತ್ತು. ಈ ಆಸ್ತಿಯನ್ನು ತನಗೇ ಬರೆದುಕೊಡಬೇಕೆಂದು ಪೀಡಿಸುತ್ತಿದ್ದ. ಇದಕ್ಕೆ ಗಂಡ ಕೂಡ ಕುಮ್ಮಕ್ಕು ಕೊಟ್ಟಿದ್ದರಿಂದ ಇಬ್ಬರಿಂದಲೂ ಕಿರುಕುಳ ಉಂಟಾಗಿದೆ ಎಂದು ದೂರಿದರು.
ಹಣ, ಆಸ್ತಿಗಾಗಿ ಹೆತ್ತ ತಾಯಿಯನ್ನೂ ಬೀದಿಪಾಲು ಮಾಡಿದ್ದಾರೆ, ನನಗೂ ಕಿರುಕುಳ ನೀಡಿದ್ದಾರೆ. ಇದರಿಂದ ನೊಂದ ನಾನು ಚಿಕ್ಕ ಮಗಳು ಸಿಂಧು ಜೊತೆ ಬೆಂಗಳೂರಿಗೆ ಬಂದಿದ್ದೇನೆ.
ಸಮಾಜ ಸೇವಕಿ ಪದ್ಮಾ ಭಟ್ ಅವರನ್ನು ಸಂಪರ್ಕಿಸಿ, ಈಗ ಜ್ಞಾನಭಾರತಿಯ ನಾಗದೇವನಹಳ್ಳಿಯ ಸತ್ಯಸಾಯಿ ಮಹಿಳಾ ಚಾರಿಟೇಬಲ್ ಟ್ರಸ್ಟ್‍ನ ಆಶ್ರಯ ಪಡೆದಿದ್ದು, ನನಗೆ ನ್ಯಾಯ ಕೊಡಿಸಲು ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣ ಬೆಂಬಲಕ್ಕೆ ನಿಂತಿದೆ ಎಂದು ಹೇಳಿದರು.