

ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಿ ತಿಕ್ಕಾಟಕ್ಕೆ ಕಾರಣವಾಗಿದ್ದ ಆಧಾರ ಮಾಹಿತಿ ಮತ್ತು ರಾಷ್ಟ್ರೀಯ ಜನಸಂಖ್ಯಾ ಕೋಷ್ಟಕ (ಎನ್ ಪಿಆರ್) ಹೊಂದಿರುವ ಮಾಹಿತಿಯನ್ನು ಏಕೀಕೃತಗೊಳಿಸುವ ಬಗ್ಗೆ ಕೇಂದ್ರ ಸರ್ಕಾರದ ಉದ್ದೇಶಿಸಿದೆ. ಈ ಉದ್ದೇಶಕ್ಕಾಗಿ ಸರ್ಕಾರ ರು. 950 ಕೋಟಿ ಮೊತ್ತವನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದೆ.
ಮುಂದಿನ ಒಂದು ವರ್ಷದಲ್ಲಿ ಎನ್‍ಪಿಆರ್ ವತಿಯಿಂದ ದೇಶಾದ್ಯಂತ ಮನೆ ಮನೆಗೆ ಸರ್ವೆ ನಡೆಯಲಿದೆ. ಈ ಸಂದರ್ಭದಲ್ಲಿ ಆಧಾರ್‍ನ ಹಾಗೂ ಎನ್‍ಪಿಆರ್‍ನ ಮಾಹಿತಿಯನ್ನು ತಾಳೆ ನೋಡಲಾಗುತ್ತದೆ. ಯಾವನೇ ಒಬ್ಬ ವ್ಯಕ್ತಿ ಆಧಾರ ಸಂಖ್ಯೆ ಇದ್ದರೆ ಅವರು ಎನ್‍ಪಿಆರ್‍ನಲ್ಲಿ ಮಾಹಿತಿ ನೋಂದಾವಣೆ ಮಾಡಬೇಕಾಗಿಲ್ಲ.
ಆಧಾರ್ ಬಳಿ 48 ಕೋಟಿ ಮಂದಿಯ ಬೆರಳಚ್ಚು ಮತ್ತು ಇತರ ವಿವರಗಳು ಹಾಗೂ ಎನ್‍ಪಿಆರ್ ಬಳಿ 27 ಕೋಟಿ ಮಂದಿಯ ಮಾಹಿತಿ ದಾಖಲಾಗಿವೆ. ಆಧಾರ್ ಕಾರ್ಡ್ ಮತ್ತು ಎನ್‍ಪಿಆರ್‍ನ ದುರುಪಯೋಗ ತಪ್ಪಿಸಲು ಈ ನಿರ್ಧಾರ ಅನುಕೂಲವಾಗಲಿದೆ. ಕೆಲ ದಿನಗಳ ಹಿಂದಷ್ಟೇ ಮಧ್ಯಪ್ರದೇಶದಲ್ಲಿ ವ್ಯಕ್ತಿಯೊಬ್ಬ ಪ್ರೀತಿಯ ನಾಯಿಗೆ ಆಧಾರ್ ಕಾರ್ಡ್ ಕೊಡಿಸಿ ಜೈಲು ಪಾಲಾಗಿದ್ದಾನೆ.