

ನವದೆಹಲಿ: ಜೂನ್ 8ರಂದು ಗಿಲ್ಗಿಟ್ ಮತ್ತು ಬಲ್ತಿಸ್ತಾನ್‌ನಲ್ಲಿ ಚುನಾವಣೆ ನಡೆಸಲು ಮುಂದಾಗಿರುವ ಪಾಕಿಸ್ತಾನಕ್ಕೆ ಭಾರತ ಮಂಗಳವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, 'ಅದು ಭಾರತದ ಅವಿಭಾಜ್ಯ ಅಂಗವಾಗಿದ್ದು, ಅಲ್ಲಿ ಅಕ್ರಮವಾಗಿ ಭಾರತದ ಕಣ್ಣಿಗೆ ಮಣ್ಣೆರಚಿ ಚುನಾವಣೆ ನಡೆಸಲು ಯತ್ನಿಸಿದರೆ ಪರಿಸ್ಥಿತಿ ನೆಟ್ಟಗಿರಲ್ಲ' ಎಂದು ಎಚ್ಚರಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ವಿಕಾಸ್ ಸ್ವರೂಪ್ ಅವರು, ಆ ಪ್ರಾಂತ್ಯಗಳ ಜನರ ರಾಜಕೀಯ ಹಕ್ಕುಗಳನ್ನು ಕಿತ್ತಿಕೊಳ್ಳಲು ಪಾಕಿಸ್ತಾನ ಸದಾ ಯತ್ನಿಸುತ್ತಿದೆ ಎಂದಿದ್ದಾರೆ.
'ಭಾರತದ ಗಡಿಯ ಬಗ್ಗೆ ಚೆನ್ನಾಗಿ ಗೊತ್ತು. ಗಿಲ್ಗಿಟ್ ಮತ್ತು ಬಲ್ತಿಸ್ತಾನ್ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಗಿಲ್ಗಿಟ್ ಬಲ್ತಿಸ್ತಾನ್ ಸಬಲೀಕರಣ ಮತ್ತು ಸ್ವ ಸರ್ಕಾರದ ಆದೇಶ' ಅಡಿ ಪಾಕಿಸ್ತಾನ ಜೂನ್ 8ರಂದು ಚುನಾವಣೆ ನಡೆಸುತ್ತಿರುವುದು ಅಕ್ರಮ ಮತ್ತು ಕಾನೂನು ಬಾಹಿರ ಎಂದಿದ್ದಾರೆ.
ದುರದೃಷ್ಟವಶಾತ್ ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಆಕ್ರಮಿತ ನೀತಿಗಳಿಂದಾಗಿ ಅಲ್ಲಿನ ಜನ ಭಯೋತ್ಪಾದನೆ ಮತ್ತು ತೀವ್ರ ಆರ್ಥಿಕ ಸಂಕಷ್ಟಗಳ ಬಲಿಪಶುಗಳಾಗುತ್ತಿದ್ದಾರೆ ಎಂದು ಸ್ವರೂಪ್ ಕಳವಳ ವ್ಯಕ್ತಪಡಿಸಿದ್ದಾರೆ.