ಗೋವಾ ಸಾಮೂಹಿಕ ಅತ್ಯಾಚಾರ ಘಟನೆ ನಡೆದಿದ್ದು ಸೇಡಿಗಾಗಿ: ಪೊಲೀಸರು

ಗೋವಾದಲ್ಲಿ ಪೊಲೀಸರಂತೆ ನಟಿಸಿ ಮಹಿಳೆಯರಿಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಅತ್ಯಾಚಾರಕ್ಕೆ ಸೇಡೇ ಕಾರಣ ಎಂದು ಪೊಲೀಸರು ಹೇಳಿದ್ದಾರೆ...
ಗೋವಾ ಅತ್ಯಾಚಾರ ಪ್ರಕರಣ: ಸೇಡಿಗಾಗಿ ಅತ್ಯಾಚಾರ ಮಾಡಿದ ಯುವಕರು (ಸಾಂದರ್ಭಿಕ ಚಿತ್ರ)
ಗೋವಾ ಅತ್ಯಾಚಾರ ಪ್ರಕರಣ: ಸೇಡಿಗಾಗಿ ಅತ್ಯಾಚಾರ ಮಾಡಿದ ಯುವಕರು (ಸಾಂದರ್ಭಿಕ ಚಿತ್ರ)

ನವದೆಹಲಿ: ಗೋವಾದಲ್ಲಿ ಪೊಲೀಸರಂತೆ ನಟಿಸಿ ಮಹಿಳೆಯರಿಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಅತ್ಯಾಚಾರಕ್ಕೆ ಸೇಡೇ ಕಾರಣ ಎಂದು ಪೊಲೀಸರು ಹೇಳಿದ್ದಾರೆ.

ಅತ್ಯಾಚಾರಕ್ಕೊಳಗಾದ ಇಬ್ಬರು ಯುವತಿಯರು ದೆಹಲಿ ಮೂಲದವರಾಗಿದ್ದು, ರಜೆ ನಿಮಿತ್ತ ಬಾಡಿಗೆ ಕಾರೊಂದನ್ನು ನೇಮಿಸಿಕೊಂಡು ಗೋವಾದ ಅಂಜುನಾ ಬೀಚ್ ಗೆ ತೆರಳುತ್ತಿದ್ದರು. ಈ ವೇಳೆ ರಸ್ತೆಯ ಮಧ್ಯೆ 5 ಜನರ ಯುವಕರ ಗುಂಪೊಂದು ತಾವು ಮಾದಕದ್ರವ್ಯ ನಿಗ್ರಹ ಘಟಕದ ಪೊಲೀಸ್ ಅಧಿಕಾರಿಗಳು ಎಂದು ಸುಳ್ಳು ಹೇಳಿ, ಶೋಧನೆ ನೆಪ ನೀಡಿ ಫ್ಲ್ಯಾಟ್ ಒಂದಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದರು ಎಂದು ಜೂನ್ 4 ಪ್ರಕರಣವೊಂದು ದಾಖಲಾಗಿತ್ತು.

ಇದೀಗ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಅತ್ಯಾಚಾರಕ್ಕೊಳಗಾದ ಯುವತಿಯರು ಅಂತರ್ಜಾಲದ ಮೂಲಕ ಮಹಿಳೆಯರನ್ನು ಕಳುಹಿಸುವ ನೆಪದಲ್ಲಿ ಕಳ್ಳತನ ಮಾಡುತ್ತಿದ್ದವರ ಗುಂಪಿಗೆ ಸೇರಿದ್ದು, ಕಳ್ಳರಿಗೆ ಸಾಥ್ ನೀಡುತ್ತಿದ್ದರು ಎಂದು ತಿಳಿದುಬಂದಿದೆ.

ಆರೋಪಿ ಅಜಯ್ ಕುಮಾರ್ ಬುಬ್ಸಾ ಎಂಬುವವನ ಸಂಬಂಧಿ ಮಹೇಂದರ್ ಸಿಂಗ್ ಎಂಬುವವನು ಅಮೆರಿಕದಲ್ಲಿದ್ದು, ಅಜಯ್ ನೊಂದಿಗೆ ಗೋವಾಗೆ ಬಂದಾಗ ಒಬ್ಬ ಹುಡುಗಿಬೇಕೆಂದು ಕೇಳಿದ್ದನು. ತನ್ನ ಸಂಬಂಧಿಯ ಮಾತಿಗೆ ಒಪ್ಪಿಗೆ ನೀಡಿದ ಅಜಯ್ ಕುಮಾರ್, ಹುಡುಗಿಗಾಗಿ ಅಂತರ್ಜಾಲದ ಮೂಲಕ ಮನೋಜ್ ಎಂಬಾತನನ್ನು ಸಂಪರ್ಕಿಸಿದ್ದನು. ಆತ ಹುಡುಗಿಯನ್ನು ಕಳುಹಿಸಿಕೊಡುವುದಾಗಿ ತಿಳಿಸಿದ್ದನು. ಇದರಂತೆ ಮಹೇಂದರ್ ಸಿಂಗ್ ಗೋವಾಗೆ ಬಂದಾಗ ಮೂವರು ಹುಡುಗಿಯರನ್ನು ತೋರಿಸಿದ್ದನು. ಇವರಲ್ಲಿ ಮಹೇಂದರ್ ಸಿಂಗ್ ಓರ್ವ ಯುವತಿಯನ್ನು ಆಯ್ಕೆ ಮಾಡಿಕೊಂಡಿದ್ದನು.

ನಂತರ ಹುಡುಗಿಯನ್ನು ಮಹೇಂದರ್ ಸಿಂಗ್ ಹೋಟೆಲ್ ವೊಂದರ ರೂಮಿಗೆ  ಕರೆದುಕೊಂಡು ಹೋದಾಗ, ಹುಡುಗಿ ಆರೋಗ್ಯದ ಸಮಸ್ಯೆ ಹೇಳಿ ಇದ್ದಕ್ಕಿದ್ದಂತೆ ಹೊರಟು ಹೋಗಿದ್ದಾಳೆ. ಸ್ವಲ್ಪ ಸಮಯವಾದ ನಂತರ ಮಹೇಂದರ್ ಸಿಂಗ್ ಗೆ ತನ್ನ ರೂಮಿನಲ್ಲಿ ಹಣ ಹಾಗೂ ಮೊಬೈಲ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ನಂತರ ಹುಡುಗಿಯೇ ಕಳ್ಳತನ ಮಾಡಿದ್ದಾಳೆ ಎಂಬುದು ಅರಿವಾಗಿದೆ.

ನಂತರ ತನ್ನ ಸಂಬಂಧಿ ಅಜಯ್ ಕುಮಾರ್ ಬುಬ್ಸಾಗೆ ವಿಷಯ ತಿಳಿಸಿ, ಹಣ, ಮೊಬೈಲ್ ವಾಪಸ್ ಕೊಡಿಸುವಂತೆ ಬೈದಿದ್ದಾನೆ. ಇದಕ್ಕೆ ಕೋಪಗೊಂಡ ಅಜಯ್ ಕುಮಾರ್ ಅಂತರ್ಜಾಲದ ಮುಖಾಂತರ ಮನೋಜ್ ನನ್ನು ಸಂಪರ್ಕಿಸಿ ಹಣ ನೀಡುವಂತೆ ಹೇಳಿದ್ದಾನೆ. ಇದಕ್ಕೆ ಉತ್ತರ ನೀಡಿದ್ದ ಮನೋಜ್ ಹಣ ಹಿಂತಿರುಗಿಸುವಾಗಿ ತಿಳಿಸಿ, ಮತ್ತೆ ಎಷ್ಟು ಬಾರಿ ಸಂಪರ್ಕಿಸಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ.

ಇಂದರಿಂದ ಕೆಂಡಾಮಂಡಲವಾಗ ಅಜಯ್ ಕುಮಾರ್ ಹಾಗೂ ಮಹೇಂದರ್ ಸಿಂಗ್ ಇಬ್ಬರು ತಮ್ಮ ಸ್ನೇಹಿತರನ್ನು ಸಹಾಯ ಕೇಳಿ ಯುವತಿಯರ ಅಪಹರಣಕ್ಕೆ ಯೋಜನೆ ರೂಪಿಸಿದ್ದಾರೆ. ಯೋಜನೆಯಂತೆ ಯುವತಿಯರು ಸಿಕ್ಕ ಕೂಡಲೇ ಅಪಹರಣ ಮಾಡಿದ ಯುವಕರು, ಯುವತಿಯರ ಮೇಲಿದ್ದ ಕೋಪಕ್ಕೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವೈದ್ಯಕೀಯ ತಪಾಸಣೆಯಲ್ಲಿ ಯುವತಿಯರ ಮೇಲೆ ಅತ್ಯಾಚಾರವಾಗಿರುವುದು ಧೃಢವಾಗಿದ್ದು, ಪ್ರಕರಣ ಸಂಬಂಧ ಅಜಯ್ ಕುಮಾರ್ ಕುಬ್ಸಾ, ನದೀಮ್ ಖಾನ್, ಜೀವನ್ ಪವರ್, ಕಾಮೇಶ್ ಚೌಧರಿ ಮತ್ತು ಟ್ರಿಬೊರ್ ಜೋಸೆಫ್ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ಮನೋಜ್ ಕುಮಾರ್ ಗಾಗಿ ಹುಡುಕಾಟ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com