

ರಾಂಪುರ: ಯೋಗಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಸಚಿವ ಅಜಂ ಖಾನ್ ಅವರು, 'ಉತ್ತಮ ಮಾನಸಿಕ ಆರೋಗ್ಯಕ್ಕಾಗಿ ಅವರು ನಮಾಜ್ ಮಾಡಲಿ' ಎಂದಿದ್ದಾರೆ.
'ಯೋಗಿ ನಮಾಜ್ ಮಾಡಬೇಕು ಎಂಬ ನನ್ನ ಸಲಹೆ ತಪ್ಪಾಗಿರಬಹುದು. ಆದರೆ ಅವರು ಎಲ್ಲಿಯವರೆಗೆ ವ್ಯಾಯಾಮ (ಸೂರ್ಯ ನಮಸ್ಕಾರ ) ಅಳವಡಿಸಿಕೊಳ್ಳಿ ಅಂತ ಒತ್ತಾಯಿಸುತ್ತಾರೋ, ಅಲ್ಲಿಯವರೆಗೂ ನಾನು ನಮಾಜ್ ಮಾಡುವಂತೆ ಒತ್ತಾಯಿಸುತ್ತೇನೆ' ಎಂದಿದ್ದಾರೆ.
'ನಮಾಜ್ ಮಾಡುವುದರಿಂದ ಕೇವಲ ದೈಹಿಕ ಸಾಮರ್ಥ್ಯ ಮಾತ್ರ ಅಲ್ಲ, ಅವರ ಬುದ್ಧಿಯನ್ನು ಸಹ ಸರಿಯಾದ ಟ್ರ್ಯಾಕ್‌ಗೆ ತರುತ್ತದೆ' ಎಂದು ಉತ್ತರ ಪ್ರದೇಶ ಸಚಿವ ಹೇಳಿದ್ದಾರೆ.
ಯೋಗ ದಿನದಂದು ಸೂರ್ಯ ನಮಸ್ಕಾರ ಮಾಡುವ ಕುರಿತು ಅಪಸ್ವರ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಸೂರ್ಯ ನಮಸ್ಕಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರನ್ನು ದೇಶದಿಂದ ಹೊರಗೆ ಹಾಕಬೇಕು ಇಲ್ಲವೇ ಬೆಳಕಿಲ್ಲದ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿ ಸಾಯುವವರೆಗೂ ಬೆಳಕು ನೋಡದಂತೆ ಮಾಡಬೇಕು ಎಂದು ಯೋಗಿ ಆದಿತ್ಯನಾಥ್ ಹೇಳಿದ್ದರು.