
ನವದೆಹಲಿ: ಲಲಿತ್ ಮೋದಿ ವಿವಾದಕ್ಕೆ ಹೊಸ ಸೇರ್ಪಡೆ. ಮುಂಬೈ ಪೊಲೀಸ್ ಮುಖ್ಯಸ್ಥ ರಾಕೇಶ್ ಮರಿಯಾ ಅವರು ಕಳೆದ ವರ್ಷ ಲಂಡನ್‍ನಲ್ಲಿ ಲಲಿತ್‍ರನ್ನು ಭೇಟಿಯಾಗಿರುವ ಫೋಟೋಗಳು ಶನಿವಾರ ಬಹಿರಂಗವಾಗಿದೆ.
ಇದು ವಿವಾದ ಸೃಷ್ಟಿಸುತ್ತಿದ್ದಂತೆ ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಕೇಶ್ ಮರಿಯಾ, ``ನಾನು ಕಳೆದ ಜುಲೈನಲ್ಲಿ ಸಮಾವೇಶವೊಂದರಲ್ಲಿ ಪಾಲ್ಗೊಳ್ಳಲೆಂದು ಲಂಡನ್‍ಗೆ ತೆರಳಿದ್ದೆ. ಅಲ್ಲಿ ಲಲಿತ್‍ರನ್ನು ಭೇಟಿಯಾಗಿದ್ದು ನಿಜ. ಲಲಿತ್ ಮತ್ತು ಅವರ ವಕೀಲರು ನನ್ನನ್ನು ಸಂಪರ್ಕಿಸಿ, ಅವರ ಜೀವಕ್ಕೆ ಭೂಗತಲೋಕದಿಂದ ಬೆದರಿಕೆ ಇರುವ ಬಗ್ಗೆ ತಿಳಿಸಿದರು. ನಾನು ಅವರಿಗೆ ಮುಂಬೈಗೆ ಬಂದು ಅಧಿಕೃತ ದೂರು ದಾಖಲಿಸುವಂತೆ ಸೂಚಿಸಿದೆ. ನಂತರ ಭಾರತಕ್ಕೆ ವಾಪಸಾದ ಮೇಲೆ ನಾನು ಈ ವಿಚಾರದ ಬಗ್ಗೆ (ಲಲಿತ್ ರನ್ನು ಭೇಟಿಯಾದ) ರಹಸ್ಯ ವರದಿ ಸಿದ್ಧಪಡಿಸಿ ಡಿಜಿಪಿ ಹಾಗೂ ಗೃಹ ಇಲಾಖೆಗೆ ನೀಡಿದೆ'' ಎಂದು ತಿಳಿಸಿದ್ದಾರೆ.
ಮುಂದುವರಿದ ಪ್ರತಿಭಟನೆ: ಲಲಿತ್‍ಗೆ ನೆರವಾದ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಾಜಸ್ಥಾನ ಸಿಎಂ ರಾಜೇ ರಾಜಿನಾಮೆಗೆ ಒತ್ತಾಯಿಸಿದ ಪ್ರತಿಭಟನೆಗಳು ಮುಂದುವರಿದಿವೆ. ಆಮ್ ಆದ್ಮಿ ಪಕ್ಷದ ಯುವಘಟಕದ ಸದಸ್ಯರು ಶನಿವಾರ ಸಚಿವೆ ಸುಷ್ಮಾ ಅವರ ದೆಹಲಿಯಲ್ಲಿರುವ ನಿವಾಸದೆದುರು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಇಬ್ಬರು ನಾಯಕರಿಂದಲೂ ರಾಜಿನಾಮೆ ಪಡೆಯುವಂತೆ ಆಗ್ರಹಿಸಿದ್ದಾರೆ.
Advertisement