
ಲಂಡನ್: ಲಂಡನ್ನ ಪ್ರತಿಷ್ಠಿತ ಪಾರ್ಲಿಮೆಂಟ್ ಸ್ಕ್ವೇರ್ ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕಂಚಿನ ಪ್ರತಿಮೆಯನ್ನು ಶನಿವಾರ ಅನಾವರಣಗೊಳಿಸಲಾಯಿತು.
ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೋನ್ ಮತ್ತು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿದರು. ಬ್ರಿಟನ್ ಸರ್ಕಾರ ಗಾಂಧೀಜಿ ಪ್ರತಿಮೆ ಅನಾವರಣ ಸಮಾರಂಭಕ್ಕೆ ಜೇಟ್ಲಿಯವರನ್ನು ಅಹ್ವಾನಿಸಿತ್ತು. ಕಾರ್ಯಕ್ರಮಕ್ಕೆ ಗಾಂಧೀಜಿಯವರ ಮೊಮ್ಮಗ ಮತ್ತು ಪಶ್ಚಿಮ ಬಂಗಾಳ ಮಾಜಿ ರಾಜ್ಯಪಾಲರಾದ ಗೋಪಾಲಕೃಷ್ಣ ಗಾಂಧಿ ಮತ್ತು ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರು ಉಪಸ್ಥಿತರಿದ್ದರು.
ವಿಶ್ವದ ರಾಜಕೀಯ ಇತಿಹಾಸದಲ್ಲಿ ಅತ್ಯುನ್ನತ ಸ್ಥಾನ ಪಡೆದಿರುವ ಮಹಾತ್ಮಾ ಗಾಂಧಿಯವರ ಪ್ರತಿಮೆಯನ್ನು ಪಾರ್ಲಿಮೆಂಟ್ ಸ್ಕ್ವೇರ್ ನಲ್ಲಿ ಸ್ಥಾಪಿಸಿರುವುದು ಅವರಿಗೆ ನಾವು ತೋರಿರುವ ಗೌರವವಾಗಿದೆ. ಆ ಮೂಲಕ ಲಂಡನ್ನಲ್ಲಿ ಅವರ ನೆನಪುಗಳನ್ನು ಉಳಿಸುವ ಪ್ರಯತ್ನವಾಗಿದೆ ಎಂದು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ತಿಳಿಸಿದರು. ಗಾಂಧಿ ಪ್ರತಿಮೆಯು ಗಾಂಧೀಜಿಯವರ ತತ್ವಾದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸಲು ಅನುಕೂಲವಾಗಲಿದೆ. ಬ್ರಿಟನ್ ಸರ್ಕಾರದ ಈ ಕ್ರಮದಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧವನ್ನು ವೃದ್ಧಿಸಲಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ತಿಳಿಸಿದ್ದಾರೆ.
ಮಹಾತ್ಮಾ ಗಾಂಧೀಜಿ 1931ರಲ್ಲಿ ಲಂಡನ್ಗೆ ತೆರಳಿದ್ದಾಗ ತೆಗೆದಿದ್ದ ಫೋಟೋದಿಂದ ಸ್ಪೂರ್ತಿ ಪಡೆದಿದ್ದ ಕಲಾವಿದ ಫಿಲಿಪ್ ಜಾಕ್ಸನ್ ಅವರು ಕಷ್ಟಪಟ್ಟು ಈ ಸುಂದರ ಪ್ರತಿಮೆಯನ್ನು ರೂಪಿಸಿದ್ದಾರೆ.
Advertisement