

ಇರಾಕ್: ಇರಾಕ್ ನಲ್ಲಿ ಐಎಸ್ಐಎಸ್ ಉಗ್ರರು ನಡೆಸುತ್ತಿರುವ ಅಟ್ಟಹಾಸ ತಾರಕ್ಕೇರಿದ್ದು, ಗೂಢಚಾರ್ಯ ಮಾಡುತ್ತಿದ್ದಾರೆ ಎಂದು ಶಂಕಿಸಿ 9 ಮಂದಿಯನ್ನು ಸಾಲಾಗಿ ನಿಲ್ಲಿಸಿ ಶೂಟೌಟ್ ಮಾಡಿದ ವೀಡಿಯೋ ಒಂದನ್ನು ಇಸಿಸ್ ಭಾನುವಾರ ಬಿಡುಗಡೆ ಮಾಡಿದೆ.
ಇಸಿಸ್ ಬಿಡುಗಡೆ ಮಾಡಿರುವ ವೀಡಿಯೋ ಸುಮಾರು 6 ನಿಮಿಷಗಳಿದ್ದು, ವೀಡಿಯೋದಲ್ಲಿ ಶೂಟೌಟ್ ಮಾಡುವುದಕ್ಕೂ ಮೊದಲು ಉಗ್ರರು 9 ಮಂದಿಯಿಂದಲೂ ಸಂದರ್ಶನ ಪಡೆದಿದ್ದಾರೆ. ಸಂದರ್ಶನದಲ್ಲಿ ಹತ್ಯೆಯಾಗುವವರಿಗೆ ಬಲವಂತದಿಂದ ತಮ್ಮ ಸಾವಿಗೆ ಯಾರು ಕಾರಣರಲ್ಲ, ತಾವೇ ಕಾರಣರೆಂದು ಹೇಳುವಂತೆ ಮಾಡಿದ್ದಾರೆ. ನಂತರ 9 ಮಂದಿಯ ಕಣ್ಣಿಗೆ ಕಪ್ಪು ಬಣ್ಣದ ಬಟ್ಟೆಯನ್ನು ಕಟ್ಟಿದ್ದಾರೆ. ಸಂದರ್ಶನದ ನಂತರ 9 ಮಂದಿಯ ಹಿಂದೆಯೂ ಒಬ್ಬೊಬ್ಬ ಉಗ್ರ ನಿಂತು ತಮ್ಮ ಕೈಯಲ್ಲಿದ್ದ ಬಂದೂಕಿನಿಂದ ಎಲ್ಲರ ತಲೆಗೆ ಗುಂಡು ಹಾರಿದ್ದಾರೆ. ಈ ವೀಡಿಯೋವನ್ನು ಇಸಿಸ್ ಯೂಟ್ಯೂಬ್ ಗೆ ಅಪ್ ಲೋಡ್ ಮಾಡಿದೆ.
ಶೂಟೌಟ್ ನಡೆದ ಸ್ಥಳ ಈವರೆಗೂ ತಿಳಿದುಬಂದಿಲ್ಲ. ವೀಡಿಯೋದಲ್ಲಿ ಉಗ್ರರು ತಮ್ಮ ವಿರುದ್ಧ ಹೋರಾಡುವವರು, ಧರ್ಮಕ್ಕೆ ಹಾಗೂ ಅಲ್ಲಾಹುಗೆ ಮೋಸ ಮಾಡುವವರೆಗೆ ಇದೇ ರೀತಿಯ ಶಿಕ್ಷೆ ದೊರೆಯುತ್ತದೆ ಎಂಬ ಹೇಳಿಕೆ ನೀಡುವ ಮೂಲಕ ಬೆದರಿಕೆಯ ಸಂದೇಶವೊಂದನ್ನು ರವಾನೆ ಮಾಡಿದ್ದಾರೆ.