

ನವದೆಹಲಿ: ನಕಲಿ ದಾಖಲೆಗಳನ್ನು ಸೃಷ್ಟಿಸಿ ಭಾರತೀಯ ಚುನಾವಣಾ ಆಯೋಗದಿಂದ ಅನುಮತಿ ಪಡೆದಿದ್ದ ಆಮ್ ಆದ್ಮಿ ಪಕ್ಷದ ನೋಂದಣಿಯನ್ನು ರದ್ದು ಮಾಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ.
ಈ ಕುರಿತಂತೆ ಇಂದು ನ್ಯಾಯಮೂರ್ತಿ ಜಿ.ರೋಹಿಣಿ ಮತ್ತು ಆರ್.ಎಸ್. ಎಂಡ್ಲಾ ಅವರಿದ್ದ ಪೀಠ ವಿಚಾರಣೆ ಕೈಗೊಂಡಿತ್ತು. ಹಂಸ್ ರಾಜ್ ಜೈನ್ ಎಂಬುವವರು ಅರ್ಜಿ ಸಲ್ಲಿಸಿದ್ದ ವ್ಯಕ್ತಿಯಾಗಿದ್ದು, ನೋಂದಣಿ ಮಾಡಿಕೊಳ್ಳುವ ಸಲುವಾಗಿ ಆಮ್ ಆದ್ಮಿ ಪಕ್ಷ ತರಾತುರಿಯಲ್ಲಿ ಪರೀಕ್ಷಿಸದೆಯೇ ತಪ್ಪು ದಾಖಲೆಗಳನ್ನು ನೀಡಿತ್ತು. ಆಪ್ ನ ಕೆಲವು ಶಾಸಕರು ತೆರಿಗೆ ಪಾವತಿಸುವ ಭಯದಲ್ಲಿ ತಮ್ಮ ಮನೆಯ ವಿಳಾಸವನ್ನೇ ತಪ್ಪಾಗಿ ನೀಡಿದ್ದರು. ಅಲ್ಲದೆ, ಆಪ್ ಪಕ್ಷ ಲಾಂಛನ ಭಾರತದ ಅಶೋಕವನ್ನು ಹೋಲುತ್ತಿದೆ. ಹಾಗಾಗಿ ಆಪ್ ಪಕ್ಷದ ನೋಂದಣಿಯನ್ನು ರದ್ದುಗೊಳಿಸುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು.
ಇದಕ್ಕುತ್ತರಿಸಿದ್ದ ಚುನಾವಣಾ ಆಯೋಗವು ಆಪ್ ನೀಡಿದ್ದ ದಾಖಲೆಗಳನ್ನು ಪರಿಶೀಲಿಸಿದಾಗ ಯಾವುದೇ ತಪ್ಪುಗಳು ಕಂಡುಬಂದಿರಲಿಲ್ಲ. ಎಲ್ಲಾ ರೀತಿಯ ವಿಧಿವಿಧಾನ ಹಾಗೂ ಅವಶ್ಯಕತೆಯ ದಾಖಲೆಗಳನ್ನೆಲ್ಲ ಸಂಗ್ರಹಿಸಿ ತದನಂತರವಷ್ಟೇ ಆಪ್ ಪಕ್ಷವನ್ನು ನೊಂದಾಯಿಸಿಕೊಳ್ಳಲಾಗಿತ್ತು ಎಂದು ಹೇಳಿತ್ತು. ವಾದ-ವಿವಾದಗಳನ್ನು ಆಲಿಸಿದ ಹೈಕೋರ್ಟ್ ಹಂಸರಾಜ್ ಜೈನ್ ಅವರ ಸಲ್ಲಿಸಿರುವ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿದೆ.