ಕಡಿಮೆಯಾದ ಮಳೆ ಅಬ್ಬರ: ರಕ್ಷಣಾ ಕಾರ್ಯಾಚರಣೆ ಚುರುಕು

ಕಳೆದ ಶನಿವಾರದಿಂದ ಕಣಿವೆರಾಜ್ಯದಲ್ಲಿ ಅಬ್ಬರಿಸುತ್ತಿದ್ದ ಮಳೆರಾಯ ಮಂಗಳವಾರ ಕೊಂಚ ಬಿಡುವು ನೀಡಿದ್ದು, ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆಗಾಗಿ...
ಕಾಶ್ಮೀರ ಪ್ರವಾಹ
ಕಾಶ್ಮೀರ ಪ್ರವಾಹ

ಶ್ರೀನಗರ: ಕಳೆದ ಶನಿವಾರದಿಂದ ಕಣಿವೆರಾಜ್ಯದಲ್ಲಿ ಅಬ್ಬರಿಸುತ್ತಿದ್ದ ಮಳೆರಾಯ ಮಂಗಳವಾರ ಕೊಂಚ ಬಿಡುವು ನೀಡಿದ್ದು, ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆಗಾಗಿ ನಡೆಯುತ್ತಿದ್ದ ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ.

ಪ್ರವಾಹ ಪೀಡಿತ ಪ್ರದೇಶಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ದಳದ 8 ತಂಡಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇನ್ನು ಇವರಿಗೆ ಭಾರತೀಯ ವಾಯುಸೇನೆ ಕೈಜೋಡಿಸಿದ್ದು, ವಾಯುಸೇನೆಯ ಹೆಲಿಕಾಪ್ಟರ್ ಗಳು ಅಪಾಯದಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸುವ ಕಾರ್ಯಮಾಡುತ್ತಿದೆ. ಎನ್ ಡಿಆರ್ ಎಪ್ ಸಿಬ್ಬಂದಿ, ಸೈನಿಕರು ಮತ್ತು ವಾಯುಸೇನೆ ಒಗ್ಗೂಡಿ ಈ ವರೆಗೂ ಸುಮಾರು 151 ಕುಟುಂಬಗಳ 728 ಮಂದಿಯನ್ನು ರಕ್ಷಿಸಿವೆ. ಇನ್ನು ಬದಗಾಮ್ ಜಿಲ್ಲೆಯ ಚದೂರ ತಾಲ್ಲೂಕಿನ ಲಾಲ್ ಡೆನ್ ಗ್ರಾಮದಲ್ಲಿ ಹಲವು ಮನೆಗಳು ಕುಸಿದಿದ್ದು, ಹಲವರು ಪ್ರಾಣಾಪಾಯಕ್ಕೆ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ. ಇವರ ರಕ್ಷಣೆಗೆ ಸೈನಿಕರು ಧಾವಿಸಿದ್ದು, ಕಾರ್ಯಾಚರಣೆ ಭರದಿಂದ ಸಾಗಿದೆ. ಶನಿವಾರ ಪ್ರಾರಂಭವಾದ ಪ್ರವಾಹದಲ್ಲಿ ಈ ವರೆಗೂ ಸುಮಾರು 19 ಮಂದಿ ಸಾವನ್ನಪ್ಪಿರುವ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

48 ಗಂಟೆಗಳಲ್ಲಿ ಸಾಧಾರಣ ಮಳೆ
ಇನ್ನು ಹವಾಮಾನ ಇಲಾಖೆ ಇಂದು ನೀಡಿರುವ ವರದಿಯನ್ವಯ ಕಾಶ್ಮೀರದಲ್ಲಿ ಮುಂದಿನ 48 ಗಂಟೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕಳೆದ ಶನಿವಾರದಿಂದ ಎಡೆಬಿಡದೆ ಸುರಿದಿದ್ದ ಮಳೆ ಇದೀಗ ಕೊಂಚ ಬಿಡುವು ತೆಗೆದುಕೊಂಡಿದ್ದು, 48 ಗಂಟೆಗಳ ಕಾಲ ಯಾವುದೇ ರೀತಿ ಭಾರಿ ವರ್ಷಧಾರೆ ಸಂಭವಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಸೈನಿಕರು ತಮ್ಮ ಕಾರ್ಯಾಚರಣೆಯ ವೇಗವನ್ನು ಹೆಚ್ಚಿಸಿದ್ದು, ಜನರ ಪ್ರಾಣ ರಕ್ಷಣೆಗೆ ಮುಂದಾಗಿದ್ದಾರೆ. ಪ್ರವಾಹ ಪೀಡಿತ ಶ್ರೀನಗರ, ಪುಲ್ವಾಮ ಜಿಲ್ಲೆ, ಜಮ್ಮುವಿನ ಬದಗಾಮ್ ಜಿಲ್ಲೆಗಳಿಗೆ 20 ಯಾಂತ್ರಿಕ ಬೋಟ್ ಗಳನ್ನು ರವಾನೆ ಮಾಡಲಾಗಿದೆ.

ಮುಫ್ತಿಮೊಹಮದ್ ಕರೆ ಮಾಡಿ ವಿಚಾರಿಸಿದ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್
ಇನ್ನು ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮದ್ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಪ್ರವಾಹ ಪರಿಸ್ಥಿತಿಗೆ ಸಂಬಂಧಿಸಿದಂತೆ ಕಾಶ್ಮೀರಕ್ಕೆ ಯಾವುದೇ ರೀತಿಯ ನೆರವು ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ರಾಜನಾಥ್ ಸಿಂಗ್ ಅಭಯ ನೀಡಿದ್ದಾರೆ.

ಕಾಶ್ಮೀರಕ್ಕೆ 25 ಕೋಟಿ, ಜಮ್ಮುವಿಗೆ 10 ಪರಿಹಾರ ಬಿಡುಗಡೆ
ಇನ್ನು ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಮುಖ್ಯಮಂತ್ರಿ ಮುಫ್ತಿ ಮೊಹಮದ್ ಅವರು ತಮ್ಮ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಬಿಡುಗಡೆ ಮಾಡಿದ್ದಾರೆ. ಕಾಶ್ಮೀರಕ್ಕೆ 25 ಕೋಟಿ ಮತ್ತು ಜಮ್ಮುವಿಗೆ 10 ಕೋಟಿ ರುಪಾಯಿಗಳನ್ನು ಮುಫ್ತಿ ಮೊಹಮದ್ ಸಯ್ಯೀದ್ ಅವರು ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com