ಸಂವಿಧಾನ ಆಶಯ ಬುಡಮೇಲು: ಜೈಪಾಲ್ ರೆಡ್ಡಿ

ಹಣಕಾಸೇತರ ವಿಧೇಯಕಗಳನ್ನು ಹಣಕಾಸು ವಿಧೇಯಕವೆಂದು ಬಿಂಬಿಸಿ ಕೇಂದ್ರ ಸರ್ಕಾರ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಜೈಪಾಲ್ ರೆಡ್ಡಿ ಆರೋಪಿಸಿದ್ದಾರೆ...
ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಜೈಪಾಲ್ ರೆಡ್ಡಿ
ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಜೈಪಾಲ್ ರೆಡ್ಡಿ

ಬೆಂಗಳೂರು: ಹಣಕಾಸೇತರ ವಿಧೇಯಕಗಳನ್ನು ಹಣಕಾಸು ವಿಧೇಯಕವೆಂದು ಬಿಂಬಿಸಿ ಕೇಂದ್ರ ಸರ್ಕಾರ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಜೈಪಾಲ್ ರೆಡ್ಡಿ ಆರೋಪಿಸಿದ್ದಾರೆ.

ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಭಾರಿ ಪ್ರಚಾರದೊಂದಿಗೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡಿದ ಭರವಸೆಗಳೆಲ್ಲವನ್ನೂ ಈಡೇರಿಸದೇ ಇರುವ ಮೂಲಕ ದೇಶದ ಜನತೆಗೆ ಆಶಾಭಂಗವನ್ನುಂಟು ಮಾಡಿದೆ' ಎಂದು ಆಪಾದಿಸಿದರು. `ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಸಭೆಗೆ ಲೋಕಸಭೆಗೆ ಇರುವಷ್ಟೇ ಗೌರವ ಮತ್ತು ಅಧಿಕಾರವಿದೆ. ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಯಾವುದೇ ಶಾಸನಾತ್ಮಕ ನಿರ್ಧಾರಗಳಿಗೆ ರಾಜ್ಯಸಭೆಯ ಮನ್ನಣೆ ಅಗತ್ಯ. ರಾಜ್ಯ ವಿಧಾನ ಪರಿಷತ್‍ಗೂ ರಾಜ್ಯಸಭೆಗೂ ತುಂಬಾ ಅಂತರವಿದೆ. ಹಣಕಾಸು ವಿಧೇಯಕ ಹೊರತುಪಡಿಸಿ ಉಳಿದೆಲ್ಲದಕ್ಕೂ ರಾಜ್ಯಸಭೆಯ ಒಪ್ಪಿಗೆ ಬೇಕಾಗುತ್ತದೆ. ಆದರೆ, ನರೇಂದ್ರ ಮೋದಿ ಅವರು ರಾಜ್ಯಸಭೆಯನ್ನು ಬೈಪಾಸ್ ಮಾಡುತ್ತಿದ್ದಾರೆ.

ಎಲ್ಲ ವಿಧೇಯಕಕ್ಕೂ ಹಣಕಾಸು ಸ್ವರೂಪ ಕೊಟ್ಟು ಲೋಕಸಭೆಯಲ್ಲಿ ಪಾಸ್ ಮಾಡಿಕೊಳ್ಳುತ್ತಿದ್ದಾರೆ' ಎಂದು ಆಕ್ಷೇಪಿಸಿದರು. 1977ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಜನತಾ ಸರ್ಕಾರ ಇದೇ ರೀತಿ ರಾಜ್ಯಸಭೆಯನ್ನುದುರ್ಬಳಕೆ ಮಾಡಿಕೊಂಡಿತ್ತು. ಇತರೆಲ್ಲ ರಾಜಕೀಯ ಪಕ್ಷಗಳನ್ನು ಅವರು ಹಣಿಯಲು ಯತ್ನಿಸಿದರು. ಆದರೆ, ರಾಜ್ಯಸಭೆಯಲ್ಲಿ ಈ ಪ್ರಯತ್ನ ಫಲಿಸಲಿಲ್ಲ. ಬಹಮತದೊಂದಿಗೆ ಅಧಿಕಾರಕ್ಕೆ ಬಂದ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಲು ಮುಂದಾದಾಗ ಕಡಿವಾಣ ಹಾಕಬೇಕೆಂಬುದೇ ರಾಜ್ಯಸಭೆ ಸ್ಥಾಪನೆಯ ಹಿಂದಿರುವ ಸಂವಿಧಾನದ ಆಶಯ. ಹೀಗಾಗಿ ನರೇಂದ್ರ ಮೋದಿ ಅವರ ಕ್ರಮ ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದು ಕಳವಳ ವ್ಯಕ್ತಪಡಿಸಿದರು.

ಜನಪರ ಯೋಜನೆಗಳು ಬುಡಮೇಲು
ಮೋದಿ ಸರ್ಕಾರ ಜನಪರ ಯೋಜನೆಗಳನ್ನು ಬುಡಮೇಲು ಮಾಡುತ್ತಿದೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ವಿಧೇಯಕಕ್ಕೆ ಅಂದು ಪ್ರತಿಪಕ್ಷ ಸಾಲಿನಲ್ಲಿ ಕುಳಿತಿದ್ದ ಬಿಜೆಪಿ ಒಪ್ಪಿಗೆ ನೀಡಿತ್ತು. 2012-13ರಲ್ಲಿ ಯುಪಿಎ ಸರ್ಕಾರ 388 ಲಕ್ಷ ಟನ್ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡಿತ್ತು. ಆದರೆ, ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಈ ಹಂಚಿಕೆ ಪ್ರಮಾಣ ಒಂದು ಕೆಜಿಯಷ್ಟೂ ಏರಿಕೆಯಾಗಿಲ್ಲ. ಸೋರಿಕೆ ಮತ್ತು ಹಣಕಾಸು ಕೊರತೆ ಕಾರಣ ನೀಡಿ ರಾಜ್ಯಗಳಿಗೆ ಆಹಾರ ಧಾನ್ಯ ಹಂಚಿಕೆ ಕಡಿಮೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ನರೇಗಾ ಯೋಜನೆಗೆ ನೀಡುತ್ತಿದ್ದ ರು.6000 ಕೋಟಿ ಅನುದಾನವನ್ನು ಪ್ರಸಕ್ತ ಸಾಲಿನಲ್ಲಿ ಕಡಿತ ಮಾಡಿದ್ದಾರೆ ಎಂದು ಆರೋಪಿಸಿದರು.

ಇಂಡಿಯನ್ ಹಿಸ್ಟರಿ ಕಾಂಗ್ರೆಸ್‍ನ ಪಾವಿತ್ರ್ಯಕ್ಕೆ ಧಕ್ಕೆ

ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೆಲ ಸ್ವಾಯತ್ತ ಸಂಸ್ಥೆಗಳ ಪಾವಿತ್ರ್ಯಕ್ಕೆ ಧಕ್ಕೆ ತರುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಜೈಪಾಲ್ ರೆಡ್ಡಿ ಆರೋಪಿಸಿದ್ದಾರೆ. ಇಂಡಿಯನ್ ಹಿಸ್ಟರಿ ಕಾಂಗ್ರೆಸ್‍ನ 22 ಸದಸ್ಯರು ಮತ್ತು ಅಧ್ಯಕ್ಷರ ಸ್ಥಾನಕ್ಕೆ ಇತಿಹಾಸ ತಜ್ಞರಲ್ಲದವರ ನೇಮಕ ಮಾಡಲಾಗಿದೆ. ಇದರ ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡಿರುವ ಪ್ರೊ.ಸುದರ್ಶನ್ ರಾವ್ ಅವರನ್ನು ದೇಶದ ಯಾವ ವಿದ್ವಾಂಸರೂ ಇತಿಹಾಸಕಾರ ಎಂದು ಒಪ್ಪಿಕೊಳ್ಳುವುದಿಲ್ಲ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೋಮುವಾದವನ್ನು ಬೇರೆ ಬೇರೆ ಮಾರ್ಗಗಳಲ್ಲಿ ಜಾರಿ ಮಾಡುತ್ತಿದೆ ಎಂದು ಆಪಾದಿಸಿದರು.

ಕಪ್ಪುಹಣ ವಾಪಸ್ : ಸ್ವಾತಂತ್ರ್ಯ ನಂತರದ ದೊಡ್ಡ ಸುಳ್ಳು

ಭಾರಿ ಪ್ರಚಾರದೊಂದಿಗೆ ಅಧಿಕಾರಕ್ಕೆ ಬಂದ ಮೋದಿ ಚುನಾವಣೆಗೆ ಮುನ್ನ ಕಪ್ಪು ಹಣವನ್ನು ವಾಪಾಸ್ ತಂದು ಪ್ರತಿಯೊಬ್ಬ ಪ್ರಜೆಯ ಅಕೌಂಟ್‍ನಲ್ಲಿ ರು.15 ಲಕ್ಷ ಠೇವಣಿ ಇಡುವ ಭರವಸೆ ನೀಡಿದ್ದರು. ಜನ ಇದನ್ನು ನಂಬಿದರು. ಜನರು ಮರುಳಾಗುವ ರೀತಿಯಲ್ಲಿ ಯಾರೂ ಭರವಸೆ ನೀಡಿರಲಿಲ್ಲ. ಆದರೆ ಅಧಿಕಾರಕ್ಕೆ ಬಂದ ನಂತರ ಕೊಟ್ಟ ಭಾಷೆ ಈಡೇರಿಸುವಲ್ಲಿ ವಿಫಲರಾಗಿದ್ದು, ಸ್ವಾತಂತ್ರ್ಯ ನಂತರ ದೇಶದ ಜನತೆಗೆ ರಾಷ್ಟ್ರೀಯ ಪಕ್ಷವೊಂದು ನೀಡಿದ ಭಾರಿ ಸುಳ್ಳು ಭರವಸೆ ಇದಾಗಿದೆ ಎಂದು ವ್ಯಂಗ್ಯವಾಡಿದರು. ಬಿಜೆಪಿ ಅಥವಾ ಎನ್ ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಕೋಮು ಸಾಮರಸ್ಯ ಅನಿವಾರ್ಯವಾಗಿ ಹದೆಗೆಡುತ್ತದೆ. ಕೋಮುವಾದ ಒಂದೇ ರೀತಿಯಲ್ಲಿ ಇರುವುದಿಲ್ಲ. ಅದಕ್ಕೆ ಬೇರೆ ಬೇರೆ ಆಯಾಮವಿರುತ್ತದೆ. ಕೇಂದ್ರ ಸರ್ಕಾರ ಈಗ ಅದೇ ಮಾರ್ಗ ತುಳಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com