ಕಾಂಗ್ರೆಸ್ ಮಾಜಿ ಸಂಸದನ ಮನೆಯಲ್ಲಿ ಬೆಂಕಿ: ಸೊಸೆ ಸೇರಿ ಮೂವರು ಮೊಮ್ಮಕ್ಕಳು ಸಜೀವ ದಹನ

ತೆಲಂಗಾಣ ಕಾಂಗ್ರೆಸ್ ಮಾಜಿ ಸಂಸದ ಸಿರಿಸಿಲ್ಲಾ ರಾಜಯ್ಯ ಅವರ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಪರಿಣಾಮ ಸಂಸದರ ಸೊಸೆ ಹಾಗೂ ಮೂವರು ಮೊಮ್ಮಕ್ಕಳು ಸಜೀವ ದಹನವಾಗಿರುವ ಘಟನೆ ಬುಧವಾರ ನಡೆದಿದೆ...
ಕಾಂಗ್ರೆಸ್ ಮಾಜಿ ಸಂಸದನ ಮನೆಯಲ್ಲಿ ಬೆಂಕಿ: ಸೊಸೆ ಸೇರಿ ಮೊಮ್ಮಕ್ಕಳು ಸಜೀವ ದಹನ
ಕಾಂಗ್ರೆಸ್ ಮಾಜಿ ಸಂಸದನ ಮನೆಯಲ್ಲಿ ಬೆಂಕಿ: ಸೊಸೆ ಸೇರಿ ಮೊಮ್ಮಕ್ಕಳು ಸಜೀವ ದಹನ

ವಾರಂಗಲ್: ತೆಲಂಗಾಣ ಕಾಂಗ್ರೆಸ್ ಮಾಜಿ ಸಂಸದ ಸಿರಿಸಿಲ್ಲಾ ರಾಜಯ್ಯ ಅವರ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಪರಿಣಾಮ ಸಂಸದರ ಸೊಸೆ ಹಾಗೂ ಮೂವರು ಮೊಮ್ಮಕ್ಕಳು ಸಜೀವ ದಹನವಾಗಿರುವ ಘಟನೆ ಬುಧವಾರ ನಡೆದಿದೆ.

ದುರಂತಕ್ಕೆ ಗ್ಯಾಸ್ ಸೋರಿಕೆಯೇ ಕಾರಣ ಎಂದು ಹೇಳಲಾಗುತ್ತಿದ್ದು, ಮಾಜಿ ಸಂಸದ ರಾಜಯ್ಯ ಅವರ ಸೊಸೆ ಸಾರಿಕಾ ಮತ್ತು ಮೂವರು ಮೊಮ್ಮಕ್ಕಳಾದ ಅಭಿನಾ, ಅಯಾನ್ ಮತ್ತು ಶ್ರೀಯಾನ್ ಅಗ್ನಿ ಅವಘಡದಲ್ಲಿ ಸಜೀವ ದಹನವಾಗಿದ್ದಾರೆಂದು ತಿಳಿದುಬಂದಿದೆ.

ಪ್ರಸ್ತುತ ಸ್ಥಳಕ್ಕಾಗಮಿಸಿರುವ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದು, ದುರಂತದ ವೇಳೆ ಮನೆಯಲ್ಲಿದ್ದ ಮೂವರು ಮಕ್ಕಳು ಹಾಗೂ ಸೊಸೆ ಸಾರಿಕಾ ಸಜೀವ ದಹನವಾಗಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಹಿಂದೆ ರಾಜಯ್ಯ ಅವರ ಕುಟುಂಬದಲ್ಲಿ ಸಮಸ್ಯೆಗಳಿವೆ ಎಂಬ ಹಲವು ಸುದ್ದಿಗಳು ಕೇಳಿಬಂದಿತ್ತು. ರಾಜಯ್ಯ ಅವರ ಪುತ್ರ ಅನಿಲ್ ಅವರೊಂದಿಗೆ ಸಾರಿಕಾ 2002ರಲ್ಲಿ ವಿವಾಹವಾಗಿದ್ದರು. ಬಳಿಕ ಗಂಡನಿಗೆ ವಿವಾಹೇತರ ಸಂಬಂಧವಿದೆ ಎಂದು ಆರೋಪ ಮಾಡಿದ್ದ ಸಾರಿಕಾ ಮಾವ ರಾಜಯ್ಯ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದರು ಎಂದು ತಿಳಿದುಬಂದಿದೆ.

ಇದಲ್ಲದೆ, ಸಾರಿಕಾ ಈ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ತಮ್ಮ ಮಾವ ರಾಜಯ್ಯ ಅವರಿಗೆ ಪಕ್ಷದಿಂದ ಟಿಕೆಟ್ ನೀಡದಂತೆ ಮನವಿ ಮಾಡಿದ್ದರೆಂದು ಹೇಳಲಾಗುತ್ತಿದೆ. ಅಲ್ಲದೆ, ಇದೇ ವೇಳೆ ತಮ್ಮ ಮಾವನಿಗೆ ಟಿಕೆಟ್ ನೀಡಿದ್ದೇ ಆದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೇಳಿದ್ದರು ಎಂದು ಹೇಳಲಾಗುತ್ತಿದೆ.

ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯರು ಸಾರಿಕಾ ಮನೆಯಲ್ಲಿರಲು ಹಲವು ವಿರೋಧಗಳಿದ್ದವು. ಹೀಗಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳುತ್ತಿದ್ದಾರೆ.

ಸಂಸದನ ಮನೆಗೆ ದಿಢೀರ್ ಬೆಂಕಿ ಕುರಿತಂತೆ ಹಲವು ಅನುಮಾನಗಳು ಮೂಡಿದ್ದು, ಪ್ರಕರಣವನ್ನು ಪೊಲೀಸ್ ಆಯುಕ್ತ ಸುಧೀರ್ ಬಾಬು ಅವರು ತನಿಖೆ ನಡೆಸುವುದಾಗಿ ಹೇಳಿದ್ದಾರೆ.

ಸಿರಿಸಿಲ್ಲಾ ರಾಜಯ್ಯ ಅವರು ಮಾಜಿ ಕಾಂಗ್ರೆಸ್ ಸಂಸದರಾಗಿದ್ದು, ವಾರಂಗಲ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದರು. ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು. ಇದೀಗ ಕುಟುಂಬದಲ್ಲಿ ನಡೆದ ದುರಂತದಿಂದಾಗಿ ರಾಜಯ್ಯ ಅವರು ನಾಮಪತ್ರ ಸಲ್ಲಿಸುವ ಸಾಧ್ಯತೆಗಳು ಕಡಿಮೆ ಇಂದು ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com