

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ವಿರುದ್ಧದ ಧ್ವನಿಯನ್ನು ಪ್ರತಿಭಟಿಸುವ ಸಲುವಾಗಿ ಹಿರಿಯ ಬಾಲಿವುಡ್ ನಟ ಅನುಪಮ್ ಖೇರ್ ನಡೆಸುತ್ತಿರುವ ಭಾರತ ಜಾಥಾದಲ್ಲಿ ಮಾತನಾಡಿದ ಸಾಹಿತಿ ಎಸ್.ಎಸ್ ಭೈರಪ್ಪ ಅವರು ಪ್ರಶಸ್ತಿ ವಾಪಸ್ ನೀಡುತ್ತಿರುವವರು ರಾಜಕೀಯ ಸಾಹಿತಿಗಳು ಎಂದು ದೂರಿದ್ದಾರೆ.
ಸಾಹಿತಿಗಳಲ್ಲಿ ಎರಡು ವಿಧ ಒಂದು ಶುದ್ಧ ಸಾಹಿತಿ ಆದರೆ ಮತ್ತೊಂದು ರಾಜಕೀಯ ಸಾಹಿತಿ. ಶುದ್ಧ ಸಾಹಿತಿಗಳು ಯಾರೂ ತಮ್ಮಗೆ ಗೌರವ ಪಾತ್ರವಾದ ಪ್ರಶಸ್ತಿಗಳನ್ನು ಹಿಂತಿರುಗಿಸಿ ಅಪಮಾನಿಸುವುದಿಲ್ಲ. ಆದರೆ ರಾಜಕೀಯ ಸಾಹಿತಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಪ್ರಶಸ್ತಿಯನ್ನು ಹಿಂತಿರುಗಿಸುತ್ತಿದ್ದಾರೆ ಎಂದು ಭೈರಪ್ಪನವರು ದೂರಿದ್ದಾರೆ.
ದೇಶಕ್ಕೆ ಸದೃಢ ಸಮರ್ಥ ನಾಯಕ ಸಿಕ್ಕಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಯಶಸ್ವಿ ಆಳ್ವಿಕೆ ನಡೆಸುತ್ತಿದ್ದಾರೆ. ವಿದೇಶದಿಂದ ಭಾರತಕ್ಕೆ ಹೂಡಿಕೆ ತರುತ್ತಿದ್ದಾರೆ. ಆದರೆ, ಕಾಂಗ್ರೆಸ್ ನ ಕೆಲವು ಸಾಹಿತಿಗಳನ್ನು ಮುಂದಿಟ್ಟುಕೊಂಡು ಗಲಾಟೆ ಮಾಡುತ್ತಿದೆ. ಶೇ.2ರಷ್ಟು ಸಾಹಿತಿಗಳು ಮಾತ್ರ ಪ್ರಶಸ್ತಿ ಹಿಂದಿರುಗಿಸಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಅಸಹಿಷ್ಣುತೆ ಇತ್ತು. ಈಗಲೂ ಕಾಂಗ್ರೆಸ್ ಅಸಹಿಷ್ಣುತೆಯನ್ನು ಪ್ರಚಾರ ಮಾಡುತ್ತಿದ್ದಾರೆ ಎಂದರು.
ಇದೇ ವೇಳೆ ಭೈರಪ್ಪನವರು ಏಕರೂಪ ಕಾನೂನು ಸಂಹಿತೆಯ ಬಗ್ಗೆ ಸುಪ್ರೀಂಕೋರ್ಟ್ ಪದೇ ಪದೇ ಧ್ವನಿ ಎತ್ತುತ್ತಿದೆ. ಒಂದು ವೇಳೆ ನಾವು ಈ ಕುರಿತು ಮಾತನಾಡಿದರೆ, ನಮ್ಮನ್ನು ಜಾತಿವಾದಿ, ಕೋಮುವಾದಿ ಎಂದು ಹಳಿಯಲಾಗುತ್ತದೆ..ಗೋ ಹತ್ಯೆ ನಿಷೇಧಿಸಬೇಕೆಂಬುದನ್ನು ಸಹ ಸುಪ್ರೀಂ ಕೋರ್ಟ್ ಆದೇಶಿಸಿದೆ ಎಂದರು.