

10 ವರ್ಷ ಅಧಿಕಾರದಲ್ಲಿದ್ದರೂ ಆಡಳಿತ ವಿರೋಧಿ ಅಲೆಗೆ ಅವಕಾಶ ಕೊಡದೆ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಸಮಾಜದ ಎಲ್ಲಾ ವರ್ಗಗಳ ವಿಶ್ವಾಸ ಗೆದ್ದಿರುವ ನಿತೀಶ್ ನಾಯಕತ್ವ ಕ್ಕೆ ಮನ್ನಣೆ ದೊರೆತಿದೆ ಎಂಬುದಕ್ಕೆ ಫಲಿತಾಂಶವೇ ಸಾಕ್ಷಿ' ನಿತೀಶ್ ಆಡಳಿತಕ್ಕೆ ಎಲ್ಲ ಜಾತಿ ವರ್ಗಗಳ ಬೆಂಬಲ ದೊರೆತಿದೆ. ಮಹಿಳಾ ಸಬಲೀಕರಣ, ಮೂಲ ಸೌಲಭ್ಯಗಳು, ವಿದ್ಯುತ್ ಪರಿಸ್ಥಿತಿ ಸುಧಾರಣೆ ಸೇರಿ ಅಭಿವೃದ್ಧಿ ಕೆಲಸಗಳು ಕೈಹಿಡಿದಿವೆ.
ಬೆಂಗಳೂರು: `ಬಿಹಾರ ಚುನಾವಣೆ ಫಲಿತಾಂಶ ರಾಷ್ಟ್ರೀಯ ಪಕ್ಷಗಳಿಗೆ ಎಚ್ಚರಿಕೆ ಗಂಟೆ ಬಾರಿಸಿದೆ. ಇದು ಕರ್ನಾಟಕದ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ರಾಜ್ಯದಲ್ಲಿ ಮತ್ತೆ ಜನತಾಪರಿವಾರ ಒಗ್ಗೂಡಲು ಸಕಾಲ, ಈ ನಿಟ್ಟಿನಲ್ಲಿ ರಾಜಕೀಯ ಧ್ರುವೀಕರಣ ಆಗುವ ವಿಶ್ವಾಸವಿದೆ' ಎನ್ನುತ್ತಾರೆ ಸಂಯುಕ್ತ ಜನತಾದಳದ ಕರ್ನಾಟಕ ಘಟಕದ ಅಧ್ಯಕ್ಷ ಡಾ. ಎಂ.ಪಿ. ನಾಡಗೌಡ. ಚುನಾವಣೆಯಲ್ಲಿ ಜೆಡಿಯು ಮೈತ್ರಿಕೂಟ ಪ್ರಚಂಡ ಜಯಗಳಿಸಿದ ಹಿನ್ನೆಲೆಯಲ್ಲಿ `ಕನ್ನಡಪ್ರಭ' ಜತೆ ದೂರವಾಣಿ ಮೂಲಕ ಮಾತನಾಡಿ ನಾಡಗೌಡರು ಸಂತಸ ಹಂಚಿಕೊಂಡರು.
10 ವರ್ಷ ಅಧಿಕಾರದಲ್ಲಿದ್ದರೂ ಆಡಳಿತ ವಿರೋಧಿ ಅಲೆಗೆ ಅವಕಾಶ ಕೊಡದೆ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಸಮಾಜದ ಎಲ್ಲಾ ವರ್ಗಗಳ ವಿಶ್ವಾಸ ಗೆದ್ದಿರುವ ನಿತೀಶ್ ನಾಯಕತ್ವ ಕ್ಕೆ ಮನ್ನಣೆ ದೊರೆತಿದೆ ಎಂಬುದಕ್ಕೆ ಫಲಿತಾಂಶವೇ ಸಾಕ್ಷಿ' ಎಂದು ಹೇಳಿಕೊಂಡರು. `ಮೈತ್ರಿ ಕೂಟವು 180 ಕ್ಷೇತ್ರಗಳಲ್ಲಿ ಜಯಗಳಿಸುವ ನಿರೀಕ್ಷೆ ಇತ್ತು, ಈಗ ಅದರ ಆಸುಪಾಸಿಗೆ ಬಂದು ನಿಂತಿದ್ದೇವೆ. ಸಕಾರಾತ್ಮಕ ಆಡಳಿತವಾದ್ದರಿಂದ ಮೈತ್ರಿಕೂಟಕ್ಕೆ ಸಕಾರಾತ್ಮಕ ಮತಗಳು ಬಂದಿವೆ. ನಿತೀಶ್ ಆಡಳಿತಕ್ಕೆ ಎಲ್ಲ ಜಾತಿ ವರ್ಗಗಳ ಬೆಂಬಲ ದೊರೆತಿದೆ. ಬಿಜೆಪಿಯವರು ಅತಿಯಾಗಿ ಕೋಮುವಾದ ಮಾಡಿದರು.
ಗೋಮಾಂಸ ಭಕ್ಷಣೆ, ಮೀಸಲಾತಿ ಎಂಬಿತ್ಯಾದಿ ಹೇಳಿಕೆಗಳನ್ನು ನೀಡಿದರು. ನರೇಂದ್ರ ಮೋದಿ ಕೇಂದ್ರೀಕೃತ ಪ್ರಚಾರ ನಡೆಯಿತು. ಆದ್ದರಿಂದ ಬಿಹಾರದ ಜನ ಮೈತ್ರಿಕೂಟಕ್ಕೆ ಮನ್ನಣೆ ನೀಡಿದರು' ಎಂದರು. ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಒತ್ತು ಕೊಡುವಿರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು `ಬೇರೆ ಬೇರೆ ಪಕ್ಷಗಳ ನಾಯಕರು ನಮ್ಮ ಜತೆ ಸಂಪರ್ಕದಲ್ಲಿದ್ದಾರೆ, ಇತರೆ ಪಕ್ಷಗಳಲ್ಲಿರುವ ನಾಯಕರು ಮತ್ತೆ ನಮ್ಮ ಪಕ್ಷಕ್ಕೆ ವಾಪಸ್ ಮರಳುವ ಸುಳಿವು ದೊರೆತಿದೆ, ಅದರಲ್ಲೂ ಬಿಜೆಪಿ ಜತೆ ಇದ್ದವರು ಸಹ ಸೇರಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ' ಎಂದು ಅವರು ವ್ಯಾಖ್ಯಾನಿಸಿದರು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಂಪೂರ್ಣ ವಿಫಲವಾಗಿದೆ, ವಿಪಕ್ಷವಾಗಿ ಬಿಜೆಪಿ ಕೂಡ ವಿಫಲವಾಗಿದೆ. ಹೀಗಾಗಿ ಜನತಾಪರಿವಾರ ಒಗ್ಗೂಡಲು ಕಾಲ ಪಕ್ವವಾಗಿದೆ' ಎಂದರು.