ಪುಟ್ಟಪರ್ತಿ ಸತ್ಯಸಾಯಿ ಬಾಬಾ (ಸಂಗ್ರಹ ಚಿತ್ರ)
ಪುಟ್ಟಪರ್ತಿ ಸತ್ಯಸಾಯಿ ಬಾಬಾ (ಸಂಗ್ರಹ ಚಿತ್ರ)

"ನಾನು ಸತ್ಯ ಸಾಯಿ ಬಾಬಾ ಅವರ ಉತ್ತರಾಧಿಕಾರಿ"

ಪುಟ್ಟಪರ್ತಿಯ ಸತ್ಯಸಾಯಿ ಬಾಬಾ ಅವರ 90ನೇ ಜನ್ಮ ದಿನೋತ್ಸವಕ್ಕೆ ದಿನಗಣನೆ ಶುರುವಾಗಿರುವಂತೆಯೇ, ತಾನು ಬಾಬಾ ಅವರ ಉತ್ತರಾಧಿಕಾರಿ ಎಂದು ಕರ್ನಾಟಕ ಮೂಲದ ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ..

ಬೆಂಗಳೂರು: ಪುಟ್ಟಪರ್ತಿಯ ಸತ್ಯಸಾಯಿ ಬಾಬಾ ಅವರ 90ನೇ ಜನ್ಮ ದಿನೋತ್ಸವಕ್ಕೆ ದಿನಗಣನೆ ಆರಂಭವಾಗಿರುವಂತೆಯೇ, ತಾನು ಬಾಬಾ ಅವರ ಉತ್ತರಾಧಿಕಾರಿ ಎಂದು ಕರ್ನಾಟಕ ಮೂಲದ ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

ಬೆಂಗಳೂರು ಹೊರವಲಯದ ದೊಡ್ಡಬಳ್ಳಾಪುರದ ಮುದ್ದೇನಹಳ್ಳಿಯ ಮಧುಸೂಧನ್ ನಾಯ್ಡು ಎಂಬುವವರು ತಾವು ಸತ್ಯ ಸಾಯಿ ಬಾಬಾ ಅವರ ಉತ್ತರಾಧಿಕಾರಿಯಾಗಿದ್ದು, ಸಾಯಿ ಬಾಬಾ ಅವರ 90ನೇ ಜನ್ಮ ದಿನೋತ್ಸವವನ್ನು ಮುದ್ದೇನಹಳ್ಳಿಯಲ್ಲಿಯೇ ವಿಜೃಂಭಣೆಯಿಂದ ನಡೆಸುವಂತೆ ಬಾಬಾ ಆಶೀರ್ವದಿಸಿದ್ದಾರೆ ಎಂದು ಮಧುಸೂದನ್ ಅವರು ಹೇಳಿಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಆದರೆ ಮಧುಸೂದನ್ ಅವರ ಹೇಳಿಕೆಯನ್ನು ತಿರಸ್ಕರಿಸಿರುವ ಪುಟ್ಟಪರ್ತಿಯಲ್ಲಿರುವ ಸತ್ಯ ಸಾಯಿ ಬಾಬಾ ಟ್ರಸ್ಟ್ ನ ಸದಸ್ಯರು, ಬಾಬಾ ಅವರು ಯಾವುದೇ ಉತ್ತರಾಧಿಕಾರಿಯನ್ನು ನೇಮಕ ಮಾಡಿಲ್ಲ. ಮಧುಸೂದನ್ ಅವರಿಗೂ ಬಾಬಾ ಅವರಿಗೂ ಯಾವುದೇ ರೀತಿಯಿಂದಲೂ ಸಂಬಂಧವಿಲ್ಲ. ಪ್ರಚಾರ ಪಡೆಯುವ ಉದ್ದೇಶದಿಂದ ಕೆಲ ವ್ಯಕ್ತಿಗಳು ಬಾಬಾ ಅವರ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಬಾಬಾ ಭಕ್ತರು ಇಂತಹ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ಯಾರು ಈ ಮಧುಸೂದನ್..?
ಪ್ರಸ್ತುತ ತಾನು ಬಾಬಾ ಅವರ ಉತ್ತರಾಧಿಕಾರಿ ಎಂದು ಹೇಳುತ್ತಿರುವ ಮಧುಸೂಧನ್ ನಾಯ್ಡು ಅವರು ಮೂಲತಃ ಬಾಬಾ ಅವರ ಭಕ್ತರಾಗಿದ್ದು, ಪುಟ್ಟಪರ್ತಿಯಲ್ಲಿರುವ ಪ್ರಶಾಂತಿ ನಿಲಯಂ ಕ್ಯಾಂಪಸ್ ನಲ್ಲಿರುವ ಸತ್ಯಸಾಯಿ ಕಾಲೇಜಿನಲ್ಲಿ ಬಿಎಸ್ ಸಿ ಪದವಿ ಪಡೆದವರಾಗಿದ್ದಾರೆ. ಇದೇ ಸತ್ಯ ಸಾಯಿ ಕಾಮರ್ಸ್ ಕಾಲೇಜಿನಲ್ಲಿ ಎಂಬಿಎ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನೂ ಕೂಡ ಮಧುಸೂದನ್ ನಾಯ್ಡು ಪಡೆದಿದ್ದಾರೆ. ಸತ್ಯ ಸಾಯಿ ಬಾಬಾ ಅವರಲ್ಲಿ ಮಧುಸೂಧನ್ ನಾಯ್ಡು ಅವರಿಗೆ ಅಪಾರವಾದ ಗೌರವ ಮತ್ತು ಭಕ್ತಿ ಇತ್ತು ಎಂದು ಅವರ ಸಹಪಾಠಿಗಳು ತಿಳಿಸಿದ್ದಾರೆ.

ಹಲವು ಸಾಮಾಜಿಕ ಕಾರ್ಯಗಳಿಂದ ಮತ್ತು ವಿಸ್ಮಯಗಳಿಂದ ವಿಶ್ವವಿಖ್ಯಾತಿಗಳಿಸಿದ್ದ ಸತ್ಯಸಾಯಿಬಾಬಾ ಅವರು 2011ರಲ್ಲಿ ನಿಧನರಾಗಿದ್ದರು. ಬಾಬಾ ನಿಧನದ ಬಳಿಕ ಪುಟ್ಟಪರ್ತಿಗೆ ಆಗಮಿಸುತ್ತಿದ್ದ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿದಿದ್ದು, ಬಾಬಾ ಟ್ರಸ್ಟ್ ಹೆಸರಲ್ಲಿ ಇರುವ ಸಾವಿರಾರು ಕೋಟಿ ಮೌಲ್ಯದ ಆಸ್ತಿಗಳ ಮೇಲೆ ನುಂಗಣ್ಣರ ಕಣ್ಣು ಬಿದ್ದಿದೆ ಎಂದು ಹೇಳಲಾಗುತ್ತಿದೆ. ಒಂದು ಮೂಲದ ಪ್ರಕಾರ ಸತ್ಯ ಸಾಯಿ ಟ್ರಸ್ಟ್ ಹೆಸರಲ್ಲಿ ವಿವಿಧ ಬ್ಯಾಂಕುಗಳಲ್ಲಿ ಸುಮಾರು 1500 ಕೋಟಿಗೂ ಹೆಚ್ಚು ಸ್ಥಿರ ಠೇವಣಿ ಇದ್ದು, ಈ ಠೇವಣಿಯ ಬಡ್ಡಿ ಮೊತ್ತವೇ ವಾರ್ಷಿಕ 120 ಕೋಟಿ ದಾಟುತ್ತದೆ. ಇದಲ್ಲದೆ ಟ್ರಸ್ಟ್ ಗೆ ವಾರ್ಷಿಕ ಸುಮಾರು 60 ಕೋಟಿ ರು.ಗಳ ದೇಣಿಗೆ ಬರುತ್ತಿದ್ದು, ಇದನ್ನು ಸತ್ಯ ಸಾಯಿ ಬಾಬಾ ಆರಂಭಿಸಿದ್ದ ಸಾಮಾಜಿಕ ಸೇವಾ ಕಾರ್ಯಕ್ರಮಗಳಿಗೆ ಬಳೆಕ ಮಾಡಲಾಗುತ್ತಿದೆ ಎಂದು ಟ್ರಸ್ಟ್ ನ ಮೂಲಗಳು ತಿಳಿಸಿವೆ.

ಬಾಬಾ ನಿಧನಕ್ಕೂ ಪುಟಪರ್ತಿಯಲ್ಲಿರುವ ಪ್ರಶಾಂತಿ ನಿಲಯ ಆಶ್ರಮಕ್ಕೆ ವಾರ್ಷಿಕ ಸುಮಾರು 30 ಸಾವಿರದಿಂದ 40 ಸಾವಿರ ಭಕ್ತಾದಿಗಳು ಆಗಮಿಸಿ, ಬಾಬಾ ಅವರ ದರ್ಶನ ಪಡೆಯುತ್ತಿದ್ದರು. ಆದರೆ ಬಾಬಾ ನಿಧನ ಬಳಿಕ ಈ ಸಂಖ್ಯೆ ಗಣನೀಯವಾಗಿ ಇಳಿದಿದ್ದು, ಈಗ ವಾರ್ಷಿಕ ಕೇವಲ 4 ರಿಂದ 7 ಸಾವಿರ ಮಂದಿ ಮಾತ್ರ ಪುಟ್ಟಪರ್ತಿ ಬಾಬಾ ಆಶ್ರಮಕ್ಕೆ ಭೇಟಿ ನೀಡುತ್ತಾರೆ ಎಂದು ತಿಳಿದುಬಂದಿದೆ.

Related Stories

No stories found.

Advertisement

X
Kannada Prabha
www.kannadaprabha.com