ಪಣಜಿ:ತಾವು ಸದ್ಯದಲ್ಲಿಯೇ ರಾಜೀನಾಮೆ ನೀಡುವ ಯೋಚನೆಯಿಲ್ಲ. ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೀಡಿರುವ ಜವಾಬ್ದಾರಿ ಕೆಲಸಗಳನ್ನು ಮುಗಿಸಿದ ಬಳಿಕವೇ ಗೋವಾಕ್ಕೆ ಹಿಂತಿರುಗುವುದು ಎಂದು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ತಿಳಿಸಿದ್ದಾರೆ.
ಪರ್ರಿಕರ್ ಅವರು ಡಿಸೆಂಬರ್ 13ಕ್ಕೆ 60 ವರ್ಷಗಳನ್ನು ಪೂರೈಸುತ್ತಿರುವುದರಿಂದ ರಾಜೀನಾಮೆ ನೀಡುವ ಚಿಂತನೆಯಲ್ಲಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿಗಳಿಗೆ ಅವರು ಉತ್ತರಿಸಿದರು.
ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ನಿವೃತ್ತಿ ಬಗ್ಗೆ ಯಾವುದೇ ಅಂತಹ ಹೇಳಿಕೆಗಳನ್ನು ನೀಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಮೂರು ಬಾರಿ ಗೋವಾ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಪರ್ರಿಕರ್, ಟ್ವಿಟ್ಟರ್ ನಲ್ಲಿ ಹೇಳಿಕೆ ನೀಡಿ, ಸಾಮಾ ನ್ಯವಾಗಿ 60 ವರ್ಷವಾದ ಕೂಡಲೇ ಜನರು ನಿವೃತ್ತಿ ಬಗ್ಗೆ ಯೋಚಿಸುತ್ತಾರೆ. ಅದರಂತೆ ನಾನು ಕೂಡ ಯೋಚಿಸಬಹುದು. ಆದರೆ ನಾನು ಕೇಂದ್ರದಲ್ಲಿ ದೊಡ್ಡ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿದೆ. ಆ ಕೆಲಸಗಳನ್ನು ಮುಗಿಸಿದ ಬಳಿಕವಷ್ಟೇ ಗೋವಾಕ್ಕೆ ಹಿಂತಿರುಗುತ್ತೇನೆ ಎಂದು ಗೋವಾ ಜನತೆಗೆ ಭರವಸೆ ನೀಡಿದ್ದಾರೆ.
2012ರಿಂದ ಮೂರನೇ ಬಾರಿಗೆ ಗೋವಾ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮನೋಹರ್ ಪರ್ರಿಕರ್ ಅವರನ್ನು 2014ರ ಅಂತ್ಯದ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಡಿಎ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿದ್ದರು.