ವರುಣನ ಅವಕೃಪೆ: ತಳ ಕಂಡಿವೆ ರಾಜ್ಯದ ಜಲಾಶಯಗಳು

ಕಾವೇರಿ ನೀರು ಹರಿಸುವಂತೆ ತಮಿಳುನಾಡು ಕ್ಯಾತೆ ತೆಗೆದರೂ ನೀರು ಹರಿಸದಿರುವ ಕರ್ನಾಟಕದ ನಿಲುವನ್ನು ಪುಷ್ಟೀಕರಿಸುವ ಅಂಕಿ ಅಂಶಗಳನ್ನು ಕೇಂದ್ರ ಜಲ ಆಯೋಗ ಒದಗಿಸಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ನವದೆಹಲಿ: ಕಾವೇರಿ ನೀರು ಹರಿಸುವಂತೆ ತಮಿಳುನಾಡು ಕ್ಯಾತೆ ತೆಗೆದರೂ ನೀರು ಹರಿಸದಿರುವ ಕರ್ನಾಟಕದ ನಿಲುವನ್ನು ಪುಷ್ಟೀಕರಿಸುವ ಅಂಕಿ ಅಂಶಗಳನ್ನು ಕೇಂದ್ರ ಜಲ ಆಯೋಗ ಒದಗಿಸಿದೆ.

ದೇಶದಲ್ಲಿರುವ 91 ಪ್ರಮುಖ ಜಲಾಶಯಗಳ ಮೇಲೆ ನಿಗಾ ಇಟ್ಟು ನಿತ್ಯವೂ ಜಲಾಶಯಗಳ ನೀರಿನ ಸಂಗ್ರಹದ ಪ್ರಮಾಣವನ್ನು ದಾಖಲಿಸುವ ಆಯೋಗ ಗುರುವಾರ ಪ್ರಕಟಿಸಿರುವ ವರದಿಯಲ್ಲಿ ಕಾವೇರಿ ಕಣಿವೆಯ 4 ಪ್ರಮುಖ ಜಲಾಶಯಗಳಲ್ಲಿ ಭಾರಿ ನೀರಿನ ಕೊರತೆಯನ್ನೂ ದಾಖಲಿಸಿದೆ. ಸೆ.30ರವರೆಗೆ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಮಾಹಿತಿ

ಈ ವರದಿಯಲ್ಲಿದೆ. ಕೆಆರ್‍ಎಸ್, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳಲ್ಲಿ ಕಳೆದ ಸಾಲಿಗಿಂತ ಶೇ.50ಕ್ಕಿಂತ ಕಡಮೆ ನೀರಿನ ಸಂಗ್ರಹ ಇರುವುದನ್ನು ಅಂಕಿ ಅಂಶಗಳು ತಿಳಿಸಿವೆ. ಕಾವೇರಿ ಕಣಿವೆಯಷ್ಟೇ ಅಲ್ಲ ರಾಜ್ಯದ ಪ್ರಮುಖ ಎಂಟು ಜಲಾಶಯಗಳಲ್ಲೂ ನೀರಿಲ್ಲ. ಹಾರಂಗಿ ಜಲಾಶಯದಲ್ಲಿ ಶೇ.48ರಷ್ಟು ನೀರಿದ್ದರೆ, ಕೆಆರ್‍ಎಸ್‍ನಲ್ಲಿ ಶೇ.51, ಹೇಮಾವತಿಯಲ್ಲಿ ಶೇ.45 ಮತ್ತು ಕಬಿನಿಯಲ್ಲಿ ಶೇ.52ರಷ್ಟು ಮಾತ್ರ ನೀರಿದೆ.

ಕಾವೇರಿ ಕಣಿವೆಯಲ್ಲಿ ಒಟ್ಟಾರೆ ಶೇ.33ರಷ್ಟು ಮಳೆ ಕೊರತೆಯಾಗಿದೆ. ಇಷ್ಟಾದರೂ ತಮಿಳುನಾಡು ಸಾಮಾನ್ಯ ವರ್ಷದಲ್ಲಿ ಹರಿಸುವಷ್ಟೇ ನೀರು ಹರಿಸುವಂತೆ ಬೇಡಿಕೆ ಇಟ್ಟಿದೆ. ವಾಸ್ತವವಾಗಿ ತಮಿಳುನಾಡು 88 ಟಿಎಂಸಿಗೆ ಬೇಡಿಕೆ ಇಟ್ಟಿದ್ದರೆ, ರಾಜ್ಯದಲ್ಲಿ ಲಭ್ಯ ನೀರಿನ ಪ್ರಮಾಣವೇ ಸರಿಸುಮಾರು 55 ಟಿಎಂಸಿ ಮಾತ್ರ. ಸೆ.28ರಂದು ನಡೆದ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ನೀರು ಬಿಡುಗಡೆ ಸಾಧ್ಯವೇ ಇಲ್ಲ ಎಂದು ಕರ್ನಾಟಕ ಹೇಳಿದೆ.

ಈ ನಡುವೆ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಕೇಂದ್ರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಶಶಿಶೇಖರ್ 4 ರಾಜ್ಯಗಳ ತಲಾ ಇಬ್ಬರು ಪ್ರತಿನಿಧಿಗಳು, ಜಲಸಂಪನ್ಮೂಲ ಇಲಾಖೆ ಮತ್ತು ಕೇಂದ್ರ ಜಲ ಆಯೋಗದ ಪ್ರತಿನಿಧಿ ಗಳನ್ನೊಳಗೊಂಡ ಸಮಿತಿ ರಚಿಸಲಿದ್ದಾರೆ. ಈ ಸಮಿತಿ ಕಾವೇರಿ ಕಣಿವೆಯ ಜಲಾಶಯಗಳಿಗೆ ಭೇಟಿ ನೀಡಿ ವರದಿ ನೀಡಲಿದೆ.ಈ ವರದಿ ಆಧರಿಸಿ ಮೇಲುಸ್ತುವಾರಿ ಸಮಿತಿಯು ನೀರು ಹಂಚಿಕೆ ನಿರ್ದೇಶನ ನೀಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com