ನವದೆಹಲಿ: 2002ರಲ್ಲಿ ಹತ್ಯೆಗೀಡಾದ ನಿತೀಶ್ ಕಠಾರ ಅವರದ್ದು ಕೊಲೆಯೇ ಹೊರತು ಮರ್ಯಾದಾ ಹತ್ಯೆಯಲ್ಲ. ಹೀಗಾಗಿ ಹಂತಕರಿಗೆ ಗಲ್ಲು ಶಿಕ್ಷೆ ನೀಡುವುದು ಸರಿಯಲ್ಲ ಎಂದು ಶುಕ್ರವಾರ ಸುಪ್ರೀಕೋರ್ಟ್ ಅಭಿಪ್ರಾಯಪಟ್ಟಿದ್ದು, ದೆಹಲಿ ಹೈಕೋರ್ಟ್ ನೀಡಿದ್ದ ಗಲ್ಲು ಶಿಕ್ಷೆಯನ್ನು ರದ್ದು ಮಾಡಿದೆ.
2002ರಲ್ಲಿ ನಿತೀಶ್ ಕಠಾರ ಅವರನ್ನು ಅಪಹರಿಸಿದ್ದ ವಿಶಾಲ್ ಯಾದವ್ ಮತ್ತು ವಿಕಾಸ್ ಯಾದವ್ ಎಂಬುವವರು ಸುಖ್‌ದೇವ್ ಎಂಬ ಕಾಂಟ್ರಾಕ್ಟ್ ಕಿಲ್ಲರ್‌ನೊಂದಿಗೆ ಸೇರಿ ಕೊಂದುಹಾಕಿದ್ದರು. ನಿತೀಶ್ ಕಠಾರ ಅವರು ಭಾರತಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದು, ಇದೇ ಕಾರಣಕ್ಕಾಗಿ ಅವರನ್ನು ಕೊಲ್ಲಲಾಗಿದೆ ಎಂದು ಹೇಳಲಾಗುತ್ತಿತ್ತು. ಪ್ರಕರಣ ಸಂಬಂಧ ಈ ಮೂವರು ಅಪರಾಧಿಗಳ ವಿರುದ್ಧ ಮರ್ಯಾದಾ ಹತ್ಯೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಕೆಳ ನ್ಯಾಯಾಲಯ ಸುದೀರ್ಘ ವಿಚಾರಣೆ ನಡೆಸಿ ಇಬ್ಬರು ಅಪರಾಧಿಗಳಿಗೆ ಗಲ್ಲುಶಿಕ್ಷೆಯನ್ನು ಪ್ರಕಟಿಸಿತ್ತು.
ಆದರೆ, ಅಪರಾಧಿಗಳು ಮರ್ಯಾದಾ ಹತ್ಯೆ ಮಾಡಿದ್ದು, ಅವರಿಗೆ ನೀಡಿರುವ ಶಿಕ್ಷೆಯನ್ನು ಹೆಚ್ಚಿಸಬೇಕು ಎಂದು ನಿತೀಶ್ ಕಠಾರ ಅವರ ತಾಯಿ ನೀಲಂ ಕಠಾರ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ದಾಖಲಿಸಿದ್ದರು. ನೀಲಂ ಕಠಾರ ದಾಖಲಿಸಿದ್ದ ಅರ್ಜಿಯನ್ನು ಇಂದು ಪರಿಶೀಲಿಸಿದ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿದ್ದು, ಆರೋಪಿಗಳು ಮಾಡಿರುವುದನ್ನು ನ್ಯಾಯಾಲಯ ಅಪರಾಧವೆಂದು ಒಪ್ಪಿಕೊಳ್ಳುತ್ತದೆ. ಆದರೆ, ಈ ಅಪರಾಧಕ್ಕೆ ಗಲ್ಲು ಶಿಕ್ಷೆ ನೀಡುವುದು ಸರಿಯಲ್ಲ. ಇದೊಂದು ಕೊಲೆಯೇ ಹೊರತು ಮರ್ಯಾದಾ ಹತ್ಯೆಯಲ್ಲ ಎಂದು ಅಭಿಪ್ರಾಯಪಟ್ಟಿದೆ.
ಸುಪ್ರೀಂ ಆದೇಶ ಕುರಿತಂತೆ ಪ್ರತಿಕ್ರಿಯೆ ನೀಡಿರುವ ನೀಲಂ ಕಠಾರ ಅವರು, ನ್ಯಾಯಾಲಯದ ಆದೇಶವನ್ನು ನಾನು ಗೌರವಿಸುತ್ತೇನೆ. ಆದರೆ, ನ್ಯಾಯಕ್ಕಾಗಿ ಮಾಡುತ್ತಿರುವ ನನ್ನ ಹೋರಾಟ ಮುಂದುವರೆಯಲಿದೆ. ಮುಂದಿನ ವಿಚಾರಣೆ ವೇಳೆ ಮತ್ತಷ್ಟು ದಾಖಲೆಯೊಂದಿಗೆ ಹಾಜರಾಗುತ್ತೇವೆ. ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.