

ಮುಂಬಯಿ: ಶೀನಾ ಬೋರಾ ಕೊಲೆ ಪ್ರಕರಣದ ರಹಸ್ಯ ಬಹಿರಂಗವಾದ ಮೇಲೂ ನಿಗೂಢ ಸಂಗತಿಗಳ ಬಯಲಾಗುವಿಕೆ ಮುಂದುವರಿದಿದೆ. ಇಂದ್ರಾಣಿ ಮುಖರ್ಜಿಯ ಮೂತ್ರದ ಮಾದರಿಯ ಪರೀಕ್ಷೆಯಲ್ಲಿ ಕೊಕೇನ್, ಆಫೀಮಿನಂಥ ಮಾದಕ ದ್ರವ್ಯಗಳ ಕುರುಹು ಪತ್ತೆಯಾಗಿದೆ ಎಂದು ಆಸ್ಪತ್ರೆಯ ವರದಿ ತಿಳಿಸಿದೆ.
ಪ್ರಜ್ಞೆ ಕಳೆದುಕೊಂಡು ಕೋಮಾ ಸ್ಥಿತಿಗೆ ತಲುಪಿದ್ದ ಇಂದ್ರಾಣಿ ಮುಖರ್ಜಿಯನ್ನು ಸರ್ಕಾರದ ಅಧೀನದಲ್ಲಿರುವ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗಳು ಶೀನಾ ಬೋರಾ ಕೊಲೆ ಆರೋಪದ ಮೇಲೆ ಜೈಲಲ್ಲಿರುವ ಇಂದ್ರಾಣಿ ಅನಾರೋಗ್ಯ ನಾನಾ ಊಹಾಪೋಹಗಳಿಗೆ ಕಾರಣವಾಗಿತ್ತು.
ಬಳಿಕ ಆಕೆ ಗುಣಮಖರಾಗಿದ್ದು, ಅಕ್ಟೋಬರ್ 6ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮತ್ತೆ ಜೈಲು ಸೇರಿದ್ದರು. ಇಂದ್ರಾಣಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನುವ ಊಹಾಪೋಹ ಹರಡಿದ್ದ ಹಿನ್ನೆಲೆಯಲ್ಲಿ ಜೆಜೆ ಆಸ್ಪತ್ರೆ ಅಧಿಕಾರಿಗಳು ಆಕೆಯ ಮೂತ್ರದ ಮಾದರಿಯನ್ನು ಪರೀಕ್ಷೆಗಾಗಿ ಪ್ರಮುಖ ಖಾಸಗಿ ಆಸ್ಪತ್ರೆ ಪರೀಕ್ಷಾಲಯಕ್ಕೆ ಕಳುಹಿಸಿಕೊಟ್ಟಿದ್ದರು.
ಇಂದ್ರಾಣಿ ಮುಖರ್ಜಿ ಅವರ ಹಠಾತ್ ಅನಾರೋಗ್ಯ ಅನೇಕರ ಹುಬ್ಬೇರಿಸಿತ್ತು. ನಂತರದ ವೈದ್ಯಕೀಯ ಸಂಶೋಧನೆಗಳು ಉನ್ನತ ಮಟ್ಟದ ತನಿಖೆಗೆ ರಾಜ್ಯ ಸರ್ಕಾರ ಪ್ರೇರೇಪಣೆ ನೀಡಿದೆ. ಖಾಸಗಿ ಆಸ್ಪತ್ರೆಯಲ್ಲಿ ಹಲವು ನಿರ್ದಿಷ್ಟ ಪರೀಕ್ಷೆಗಳನ್ನು ನಡೆಸಲಾಗಿದ್ದು, ಆಕೆಯ ದೇಹದಲ್ಲಿ ಕೊಕೇನ್, ಆಫೀಮಿನಂಥ ಮಾದಕ ದ್ರವ್ಯಗಳ ಕುರುಹು ಇರುವ ಬಗ್ಗೆ ಮಾಹಿತಿ ಇದೆ.