ಲಖನೌ: ಫರೀದಾಬಾದ್ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸಚಿವ ವಿ.ಕೆ. ಸಿಂಗ್ ನೀಡಿರುವ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ, ವಿಕೆ ಸಿಂಗ್ ರನ್ನು ಬಂಧಿಸಿ ಜೈಲಿಗೆ ಕಳುಹಿಸಿ ಎಂದು ಹೇಳಿದ್ದಾರೆ.
ಉನ್ನತ ಸ್ಥಾನದಲ್ಲಿರುವ ಸಚಿವರೇ ಇಂತಹ ಹೇಳಿಕೆ ನೀಡುವುದು ಖಂಡನೀಯ. ದಲಿತರ ಬಗ್ಗೆ ಈ ರೀತಿ ಕೀಳು ಮಟ್ಟದಲ್ಲಿ ಯೋಚನೆ ಮಾಡುವವರನ್ನು ಮೊದಲು ಜೈಲಿಗೆ ಕಳುಹಿಸಬೇಕು ಎಂದು ಮಾಯಾವತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವರನ್ನು ಕೇಂದ್ರ ಸಚಿವ ಸಂಪುಟದಿಂದ ತಕ್ಷಣವೇ ಕೈಬಿಟ್ಟು, ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿರುವ ಮಾಯಾವತಿ, ತನ್ನ ಹೇಳಿಕೆಗಾಗಿ ವಿ.ಕೆ. ಸಿಂಗ್ ವಿರುದ್ಧ ಪ್ರಧಾನಿ ಮೋದಿ ತಕ್ಷಣವೇ ಕ್ರಮ ಕೈಗೊಂಡರೆ ಒಳ್ಳೆಯದು ಎಂದಿದ್ದಾರೆ.
ದಲಿತರ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕೇವಲ ರಾಜಕಾರಣ ನಡೆಸುತ್ತಿವೆ. ದಲಿತರ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿ ಸಂವೇದನೆಯೇ ಇಲ್ಲ. ದಲಿತರ ಮೇಲೆ ದೌರ್ಜನ್ಯ ಎಸಗುವವರಿಗೆ ಅವು ಸಹಾಯ ಮಾಡುತ್ತವೆ. ಹಲವಾರು ರಾಜ್ಯಗಳಲ್ಲಿ ದಲಿತರು ಹಾಗೂ ಮುಸ್ಲಿಮರ ಮೇಲೆದಾಳಿ ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.
ಫರೀದಾಬಾದ್ ನಲ್ಲಿ ಸಂತ್ರಸ್ತ ದಲಿತ ಕುಟುಂಬದ ಮನೆಗೆ ಹರ್ಯಾಣ ಮುಖ್ಯಮಂತ್ರಿ ಖಟ್ಟರ್ ಭೇಟಿ ನೀಡಿರುವುದು ತನ್ನ ಪಕ್ಷದ ನಾಯಕರ ಒತ್ತಡದ ಮೇರೆಗೆ, ಹೊರತು ಮನಪೂರ್ವಕವಾಗಿ ಅಲ್ಲ ಎಂದು ಮಾಯಾವತಿ ಅಭಿಪ್ರಾಯ ಪಟ್ಟಿದ್ದಾರೆ.
ಫರೀದಾಬಾದ್ ನಲ್ಲಿ ಮೇಲ್ಜಾತಿ ದುಷ್ಕರ್ಮಿಗಳ ಗುಂಪೊಂದು ದಲಿತ ಕುಟುಂಬಕ್ಕೆ ಬೆಂಕಿ ಹಚ್ಚಿದ ಪರಿಣಾಮ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು. ಈ ಬಗ್ಗೆ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ವಿಕೆ ಸಿಂಗ್ ನಾಯಿಗಳಿಗೆ ಕಲ್ಲು ಹೊಡೆದು ಸಾಯಿಸಿದರೆ, ಸರ್ಕಾರ ಏನು ಮಾಡೋಕಾಗುತ್ತೆ? ಎಂದು ಹೇಳಿಕೆ ನೀಡಿದ್ದರು.