

ನವದೆಹಲಿ: ಆಕಸ್ಮಿಕವಾಗಿ ಪಾಕಿಸ್ತಾನ ಸೇರಿದ ಭಾರತೀಯ ಮೂಲದ ಮೂಕ ಯುವತಿ ಗೀತಾ ಕೊನೆಗೂ ತವರು ಸೇರಿದ್ದಾರೆ. ಬಿಳಿ ಮತ್ತು ಕೆಂಪು ಬಣ್ಣದ ಸಲ್ವಾರ್ ತೊಟ್ಟಿದ್ದ 23 ವರ್ಷದ ಗೀತಾ ಇಂದು ಬೆಳಗ್ಗೆ ಕರಾಚಿಯಿಂದ ತನ್ನನ್ನು ನೋಡಿಕೊಂಡ ಈಧಿ ಸಂಸ್ಥೆಯ ಫಹಾದ್ ಈಧಿ ಹಾಗೂ ಕುಟುಂಬದ ನಾಲ್ವರೊಂದಿಗೆ ಬೆಳಗ್ಗೆ 10.30 ಕ್ಕೆ ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದು ಪೋಷಕರನ್ನು ಸೇರಿದ್ದಾರೆ.
7 ರಿಂದ 8 ವರ್ಷದವಳಾಗಿದ್ದಾಗ ಆಕಸ್ಮಿಕವಾಗಿ ಸಂಝೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಅನಾಥವಾಗಿ ಪಾಕಿಸ್ತಾನ ತಲುಪಿದ್ದ ಹುಡುಗಿಯನ್ನು, ಪಾಕ್‌ನ ಈಧಿ ಫೌಂಡೇಶನ್‌ನ ಬಿಲ್ಕ್ವೀಸ್ ಈಧಿ ದತ್ತು ತೆಗೆದುಕೊಂಡಿದ್ದರು. ಹೆಸರು ಹೇಳಲಾಗದ ಮೂಕ ಹುಡುಗಿಗೆ ಅವರೇ 'ಗೀತಾ' ಎಂಬ ಹೆಸರನ್ನೂ ಇಟ್ಟಿದ್ದರು.
ಗೀತಾ ತಂದೆ ಜನಾರ್ಧನ್ ಮಾಹ್ತೋ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದ ತಮ್ಮ ಮಗಳನ್ನು ಸಂತಸದಿಂದ ಬರ ಮಾಡಿಕೊಂಡರು. ಗೀತಾ ಬಂದಿರುವುದು ತಮೆಗೆಲ್ಲಾ ದೀಪಾವಳಿ ಹಬ್ಬದ ಸಡಗರ ತಂದಿದೆ ಎಂದಿದ್ದಾರೆ.
ಇದೀಗ ಗೀತಾ, ಹಲವಾರು ಫೋಟೋಗಳ ನಡುವೆ ಬಿಹಾರದ ಕುಟುಂಬವೊಂದರ ಫೋಟೋ ನೋಡಿ, ತನ್ನ ಕುಟುಂಬವೆಂದು ಗುರುತಿಸಿದ್ದು, ಗೀತಾಳನ್ನು ತವರಿಗೆ ಸೇರಿಸಲು ಎರಡೂ ಸರಕಾರಗಳು ಕೈಜೋಡಿಸಿದ್ದವು.
ಇನ್ನು ದೆಹಲಿಯಲ್ಲಿ ಗೀತಾ ಕುಟುಂಬದ ಡಿಎನ್‌ಎ ಪರೀಕ್ಷೆ ನಡೆಯಲಿದೆ. ಫಲಿತಾಂಶ ಸಕಾರಾತ್ಮಕವಾಗಿದ್ದರೆ ಕುಟುಂಬಕ್ಕೆ ಒಪ್ಪಿಸಲಾಗುವುದು. ಇಲ್ಲದಿದ್ದಲ್ಲಿ ಅವಳಿಗೆ ಹೊಂದುವಂಥ ಸಂಸ್ಥೆಗೆ ಸೇರಿಸಲಾಗುವುದು ಎಂದು ಭಾರತ ಸರಕಾರ ಹೇಳಿದ್ದರೆ, ಡಿಎನ್‌ಎ ಮ್ಯಾಚ್ ಆಗದಿದ್ದರೆ ಗೀತಾಳನ್ನು ಮರಳಿ ತಮ್ಮೊಡನೆ ಕರೆದುಕೊಂಡು ಹೋಗುವುದಾಗಿ ಈಧಿ ಫೌಂಡೇಶನ್ ಹೇಳಿದೆ.