ಅಂಕೆ ತಪ್ಪಿದ್ರೆ ಅಂಕ ತಪ್ಪೀತು!

``ಬಾಯಿಗೆ ಬಂದಂತೆ ಮಾತನಾಡುತ್ತಿರುವ ಬಿಜೆಪಿ ನಾಯಕರನ್ನು ಅಂಕೆಯಲ್ಲಿಡದೇ ಇದ್ದಲ್ಲಿ, ಭಾರತವು ದೇಶೀಯ ಹಾಗೂ ಜಾಗತಿಕ ಮಟ್ಟದಲ್ಲಿ ವಿಶ್ವಾಸಾರ್ಹತೆ ಕಳೆದುಕೊಳ್ಳಬಹುದು''. ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗ್ಲೋಬಲ್ ರೇಟಿಂಗ್ ಸಂಸ್ಥೆ...
ಪ್ರಧಾನಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಪ್ರಧಾನಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ನವದೆಹಲಿ: ``ಬಾಯಿಗೆ ಬಂದಂತೆ ಮಾತನಾಡುತ್ತಿರುವ ಬಿಜೆಪಿ ನಾಯಕರನ್ನು ಅಂಕೆಯಲ್ಲಿಡದೇ ಇದ್ದಲ್ಲಿ, ಭಾರತವು ದೇಶೀಯ ಹಾಗೂ ಜಾಗತಿಕ ಮಟ್ಟದಲ್ಲಿ ವಿಶ್ವಾಸಾರ್ಹತೆ
ಕಳೆದುಕೊಳ್ಳಬಹುದು''. ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗ್ಲೋಬಲ್ ರೇಟಿಂಗ್ ಸಂಸ್ಥೆ ಮೂಡೀಸ್ ಎಚ್ಚರಿಸಿದೆ. ಬೀಫ್ ಸೇರಿದಂತೆ ಇತ್ತೀಚಿನ ಹಲವು ವಿವಾದಗಳಿಗೆ ಸಂಬಂಧಿಸಿ ಮಾತನಾಡಿರುವ ಮೂಡೀಸ್ ವಿಶ್ಲೇಷಕರು ಈ ಎಚ್ಚರಿಕೆ ನೀಡಿದ್ದಾರೆ.

``ಪ್ರಮುಖ ಸುಧಾರಣಾ ವಿಧೇಯಕಗಳನ್ನು ಅಂಗೀಕರಿಸಲು ಮೋದಿ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಬಹುಮತವಿಲ್ಲ. ಬಿಜೆಪಿಯ ಅನೇಕ ನಾಯಕರು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರತಿಪಕ್ಷಗಳು ಅದನ್ನೇ ಬಳಸಿಕೊಂಡು, ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾತ್ಮಕ ಚಟುವಟಿಕೆಗಳನ್ನೇ ದಾಳವಾಗಿಟ್ಟುಕೊಂಡು ಕಲಾಪಗಳಿಗೆ ಅಡ್ಡಿಯುಂಟು ಮಾಡಬಹುದು. ಆಗ ಅನೇಕ ವಿಧೇಯಕಗಳು ಅಂಗೀಕಾರವಾಗದೇ ಉಳಿಯಬಹುದು. ಇದು ದೇಶದ ಆರ್ಥಿಕತೆಗೆ ಭಾರಿ ಪೆಟ್ಟು ನೀಡಲಿದೆ'' ಎಂದು ಮೂಡೀಸ್ ಹೇಳಿದೆ.

ಜತೆಗೆ, ಪ್ರಧಾನಿ ಮೋದಿ ಅವರು ತಮ್ಮ ನಾಯಕರ ಬಾಯಿ ಮುಚ್ಚಿಸದೇ ಹೋದರೆ, ಸರ್ಕಾರ ದೇಶೀಯ ಹಾಗೂ ಜಾಗತಿಕಮಟ್ಟದಲ್ಲಿ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದೂ
ಎಚ್ಚರಿಸಿದೆ. ಇದೇ ವೇಳೆ, ಈ ಅಭಿಪ್ರಾಯವು ಸ್ವತಂತ್ರವಾಗಿದ್ದು, ಮೂಡೀಸ್ ಇನ್‍ವೆಸ್ಟರ್ಸ್ ಸರ್ವೀಸ್ ಇಂಕ್.ನ ಅಭಿಪ್ರಾಯವಲ್ಲ ಎಂದೂ ಸ್ಪಷ್ಟಪಡಿಸಿದೆ. ಮೂಡೀಸ್ ಅನಾಲಿ-ಟಿಕ್ಸ್ ಎಂಬುದು ಮೂಡೀಸ್ ಕಾರ್ಪೊರೇಷನ್‍ನ ಆರ್ಥಿಕ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ. ಭಾರತದ ಇತ್ತೀಚೆಗಿನ ರಾಜಕೀಯ ವಿವಾದಗಳ ಕುರಿತು ಮೂಡೀಸ್ ನಂತಹ ಜಾಗತಿಕ ಸಂಸ್ಥೆಯೊಂದು ಅಭಿಪ್ರಾಯ ವ್ಯಕ್ತಪಡಿಸಿರುವುದು ಇದೇ ಮೊದಲು.

ಬಿಹಾರ ಚುನಾವಣೆ ಮಹತ್ವದ್ದು
: `ಇಂಡಿಯಾ ಔಟ್‍ಲುಕ್: ಸರ್ಚಿಂಗ್ ಫಾರ್ ಪೊಟೆನ್ಶಿಯಲ್' ಎಂಬ ಶೀರ್ಷಿಕೆಯಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ಮೂಡೀಸ್ ಬಿಹಾರ ಚುನಾವಣೆಯ ಬಗ್ಗೆಯೂ ಪ್ರಸ್ತಾಪಿಸಿದೆ.

ಬಿಹಾರ ಚುನಾವಣೆಯು ಮೋದಿ ನಾಯಕತ್ವಕ್ಕೆ ಪ್ರಮುಖ ಸವಾಲಾಗಿದೆ. ಇಲ್ಲಿ ಬಿಜೆಪಿ ಅಧಿಕಾರದಲ್ಲಿಲ್ಲ. ಒಂದು ವೇಳೆ, ಬಿಹಾರದಲ್ಲಿ ಬಿಜೆಪಿ ಗೆದ್ದರೆ, ರಾಜ್ಯಸಭೆಯಲ್ಲಿ ಬಹುಮತ ಗಳಿಸುವ ಸಾಧ್ಯತೆಯಿದೆ. ಒಟ್ಟಿನಲ್ಲಿ, ಭಾರತವು ಆಶ್ವಾಸನೆ ನೀಡಿರುವಂತಹ ಸುಧಾರಣೆಗಳನ್ನು ಕಾಣಲಿದೆಯೇ, ಪ್ರಗತಿಯ ದರವನ್ನು ತಲುಪಲಿದೆಯೇ ಎಂಬುದು ಇನ್ನೂ
ಸ್ಪಷ್ಟವಿಲ್ಲ. ಹಲವು ರಾಜಕೀಯ ಫಲಿತಾಂಶಗಳು ಯಶಸ್ಸಿನ ಪ್ರಮಾಣವನ್ನು ನಿರ್ಧರಿಸಲಿವೆ ಎಂದೂ ಮೂಡೀಸ್ ಹೇಳಿದೆ.

ಆಶಾಭಾವನೆ ಮಾಯವಾಗುತ್ತಿದೆ!

ಹೊಸ ಸರ್ಕಾರದ ಭ್ರಮಾಧೀನತೆ ಕಡಿಮೆಯಾದ ಮೇಲೆ ಷೇರುಮಾರುಕಟ್ಟೆಯು ಶೇ.11ರಷ್ಟು ಕುಸಿದ ದಾಖಲಿಸಿದೆ. ಜತೆಗೆ, ಪ್ರಮುಖ ಆರ್ಥಿಕ ಸುಧಾರಣೆಗಳ ಆಶ್ವಾಸನೆ ಈಡೇರಿಸುವಲ್ಲಿ ಸರ್ಕಾರ ವಿಫಲವಾದ ಕಾರಣ, ಆಶಾಭಾವನೆ ಕುಂದತೊಡಗಿದೆ. ಭೂಸ್ವಾಧೀನ ವಿಧೇಯಕ, ಸರಕು ಮತ್ತು ಸೇವಾ ತೆರಿಗೆ, ಕಾರ್ಮಿಕ ಕಾನೂನು ಮತ್ತಿತರ ಸುಧಾರಣಾ ಕ್ರಮಗಳು ದೇಶದ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಕಾರಣ, ಜಿಡಿಪಿ ಕೂಡ ಹೆಚ್ಚುತ್ತದೆ. ಆದರೆ, ಇವ್ಯಾವುದೂ ಅಂದುಕೊಂಡತೆ ನಡೆಯಲಿಲ್ಲ ಎಂದಿದೆ ಮೂಡೀಸ್. ಹೂಡಿಕೆದಾರರು ಕೂಡ ಭಾರತದ
ಆರ್ಥಿಕತೆ ಬಗ್ಗೆ ಅಷ್ಟೇನೂ ಉತ್ತಮ ಅಭಿಪ್ರಾಯ ಹೊಂದಿಲ್ಲ ಎಂದೂ ತಿಳಿಸಿದೆ. ಇದೇ ವೇಳೆ, ಬ್ಯಾಂಕಿಂಗ್ ಮತ್ತು ಹಣಕಾಸು ರಚನೆಗಳನ್ನು ಸುಧಾರಿಸುತ್ತಿರುವ ಆರ್‍ಬಿಐ ಕ್ರಮಗಳನ್ನು
ಮೂಡೀಸ್ ಶ್ಲಾಘಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com