
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಕೇಂದ್ರ ಸರ್ಕಾರ ಭೂ ವಿಧೇಯಕ ಮಸೂದೆಯನ್ನು ಹಿಂತೆಗೆದುಕೊಂಡಿರುವುದಕ್ಕೆ ಪ್ರತಿಕ್ರಿಯಿಸಿದ ಸೋನಿಯಾ ಗಾಂಧಿ, ಭೂ ವಿಧೇಯಕವನ್ನು ಹಿಂತೆಗೆದುಕೊಂಡಿರುವ ಸರ್ಕಾರದ ನಿರ್ಧಾರದಿಂದ ಅದು ವಾಸ್ತವ ಸ್ಥಿತಿಯಿಂದ ದೂರವಿದೆ ಎಂಬುದು ತಿಳಿಯುತ್ತದೆ. ಮೋದಿ ನೇತೃತ್ವದ ಸರ್ಕಾರ ಮಾತು ಮತ್ತು ಕೆಲಸದಲ್ಲಿ ಹಾಗೂ ಮಾಧ್ಯಮಗಳಲ್ಲಿ ವೈಭವೀಕರಣ ಮಾಡುವುದನ್ನು ಮತ್ತು ವಾಸ್ತವ ಸಾಧನೆಗಳನ್ನು ಹೊಂದಾಣಿಕೆ ಮಾಡುವುದರಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ದೇಶದ ಆರ್ಥಿಕ ಸ್ಥಿತಿ ಇಳಿಮುಖವಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ ಇತ್ಯಾದಿ ವಿಷಯಗಳ ಕುರಿತು ಮಾಧ್ಯಮಗಳಲ್ಲಿ ವೈಭವೀಕರಿಸಲಾಗುತ್ತಿಲ್ಲ. ಆದರೆ ವಾಸ್ತವವಾಗಿ ಅಷ್ಟೊಂದು ಕೆಲಸಗಳು ನಡೆಯುತ್ತಿಲ್ಲ. ಮಾಧ್ಯಮಗಳಿಗೆ ಬೆದರಿಕೆ ಹಾಕುವ ದುರಾಡಳಿತ ಕ್ರಮಗಳನ್ನು ಕೂಡ ಸರ್ಕಾರ ಮಾಡುತ್ತಿದೆ ಎಂದರು.ಪಾಕಿಸ್ತಾನ ಮೇಲೆ ಸುಸಂಬದ್ಧ ನೀತಿಯನ್ನು ಅನುಸರಿಸುವ ಬದಲು ಸರ್ಕಾರ ಬೇರೆಲ್ಲಾ ಮಾಡಲು ಯತ್ನಿಸುತ್ತಿದೆ. ಇದರಿಂದ ಸಂಬಂಧ ಸುಧಾರಣೆಯಾಗುವುದಿಲ್ಲ ಎಂದರು.
ಕಳೆದ ವಾರ ಮೂರು ದಿನಗಳ ಕಾಲ ನಡೆದ ಬಿಜೆಪಿ-ಆರ್ ಎಸ್ ಎಸ್ ಸಭೆಯ ಬಗ್ಗೆ ಅಸಮಾಧಾನ ಹೊರಹಾಕಿದ ಸೋನಿಯಾ ಗಾಂಧಿ, ಸುದೀರ್ಘ ವರ್ಷಗಳಿಂದ ಭಾರತದಲ್ಲಿ ಏನು ತರಲು ಹೊರಟಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಮೋದಿ ಸರ್ಕಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿಡಿತದಲ್ಲಿದ್ದು, ಅದರ ಆದೇಶದಂತೆ ನಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಮುಂದುವರಿದಿದೆ.
Advertisement