
ನವದೆಹಲಿ: ಸೋಪ್ ಮೇಲೆ ವಿನಾಯಿತಿ ಇದ್ದರೂ ಕೂಡ ರು.4 ಹೆಚ್ಚಾಗಿ ಪಡೆದ ಸೂಪರ್ ಮಾರ್ಕೆಟ್ ವೊಂದಕ್ಕೆ ರಾಷ್ಟ್ರೀಯ ಗ್ರಾಹಕ ಆಯೋಗವು ಇದೀಗ ರು.10 ಸಾವಿರ ದಂಡ ವಿಧಿಸಿದೆ.
2012ರಲ್ಲಿ ಎಸ್. ಜಯರಾಮನ್ ಎಂಬುವವರು ಸೂಪರ್ ಮಾರುಕಟ್ಟೆಯಲ್ಲಿ ಪ್ಯಾಕ್ ಮಾಡಲಾಗಿದ್ದ 5 ಚಂದ್ರಿಕಾ ಸೋಪನ್ನು ಕೊಂಡುಕೊಂಡಿದ್ದಾರೆ. ಸೋಪ್ ಮೇಲೆ ವಿನಾಯಿತಿ ಹಣವನ್ನು ನೀಡಲಾಗಿದೆ. 5 ಸೋಪ್ ಕೊಂಡರೆ ರು.75 ಪಾವತಿ ಮಾಡುವಂತೆ ತಿಳಿಸಲಾಗಿದೆ. ಆದರೂ, ಮಾರುಕಟ್ಟೆಯವರು ಸೋಪಿಗೆ ರು.79 ಹಣವನ್ನು ಪಾವತಿಸಿಕೊಂಡು ಗ್ರಾಹಕನಿಗೆ ಮೋಸ ಮಾಡಿದ್ದಾರೆ. ಹೀಗಾಗಿ ಜಯರಾಮ್ ಅವರು ರಾಜ್ಯ ಗ್ರಾಹಕರ ಆಯೋಗದ ಮೆಟ್ಟಿಲು ಏರಿದ್ದರು.
ಆದರೆ, 2013ರಲ್ಲಿ ರಾಜ್ಯ ಗ್ರಾಹಕರ ಆಯೋಗ ಈ ದೂರನ್ನು ವಜಾಗೊಳಿಸಿತ್ತು. ನಂತರ ವಜಾ ಪ್ರಶ್ನಿಸಿ ಜಯರಾಮ್ ಅವರು 2015ರಲ್ಲಿ ಮತ್ತೆ ರಾಷ್ಟ್ರೀಯ ಗ್ರಾಹಕರ ಆಯೋಗದ ಮೆಟ್ಟಿಲು ಹೆತ್ತಿದ್ದರು.
ಇದೀಗ ಮಾರುಕಟ್ಟೆಯ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಗ್ರಾಹಕ ಆಯೋಗವು, ಈ ರೀತಿಯ ಘಟನೆಗಳನ್ನು ಮರುಕಳಿಸದಂತೆ ಹಾಗೂ ಮಾರುಕಟ್ಟೆಯವರಿಗೆ ಪಾಠವಾಗುವ ಸಲುವಾಗಿ ರು.10 ಸಾವಿರ ದಂಡ ವಿಧಿಸಿದೆ.
ಗ್ರಾಹಕರಿಂದ ಹೆಚ್ಚಾಗಿ ಪಡೆಯುವ ಅಂಗಡಿಗಳ ಮಾಲೀಕರಿಗೆ ಇದೊಂದು ಪಾಠವಾಗಬೇಕೆಂಬ ಉದ್ದೇಶದಿಂದ ಕೊಯಮತ್ತೂರಿನಲ್ಲಿರುವ ಪಝಾಮುದಿರ್ ಸೂಪರ್ ಮಾರ್ಕೆಟ್ ಗೆ ರಾಷ್ಟ್ರೀಯ ಗ್ರಾಹಕ ಆಯೋಗ ದಂಡ ವಿಧಿಸಿದೆ.
ಇನ್ನು ದಂಡ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸೂಪರ್ ಮಾರ್ಕೆಟ್, ಕಾಲೇಜು ವಿದ್ಯಾರ್ಥಿಗಳು ಕೆಲಸಕ್ಕೆ ಸೇರಿಕೊಂಡಾಗಿನಿಂದ ಈ ರೀತಿಯ ತಪ್ಪುಗಳು ಹೆಚ್ಚಾಗತೊಡಗಿದೆ ಎಂದು ಹೇಳಿಕೊಂಡಿದೆ.
Advertisement