ಮುಂಬೈ: ಭೀಕರ ಬರಗಾಲಕ್ಕೆ ತುತ್ತಾಗಿರುವ ಮಹಾರಾಷ್ಟ್ರದ ಮರಾಠವಾಡ ಅಣೆಕಟ್ಟುಗಳಲ್ಲಿ ಶೇ.3ರಷ್ಟು ನೀರು ಮಾತ್ರ ಉಳಿದಿದೆ.
ಮರಾಠವಾಡ ಪ್ರಾಂತ್ಯದಲ್ಲಿರುವ 11 ಪ್ರಮುಖ ಜಲಾಶಯಗಳ ಪೈಕಿ 8 ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಶೇ.3ರಷ್ಟು ಮಾತ್ರ ನೀರು ಉಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಈ ಪ್ರಾಂತ್ಯದ ಜಲಾಶಯಗಳಲ್ಲಿ ಶೇ.11ರಷ್ಟು ನೀರಿತ್ತು. ಆದರೆ, ಈ ಬಾರಿ ತೀವ್ರ ಕುಸಿತ ಕಂಡಿದೆ ಎಂದು ಔರಂಗಬಾದ್ ವಿಭಾಗೀಯ ಆಯುಕ್ತ ಉಮಾಕಾಂತ್ ದಂಗಟ್ ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಿಂದ ಮರಾಠವಾಡದಲ್ಲಿ ಭೀಕರ ಬರಗಾಲ ಸಂಭವಿಸಿ, ಸುಮಾರು 8,522 ಹಳ್ಳಿಗಳ ಮೇಲೆ ಪರಿಣಾಮ ಬೀರಿದೆ. ಇಲ್ಲಿನ ಜನರು ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ.
ಈಗಾಗಲೇ ಕೈಗಾರಿಕೆಗಳಿಗೆ ನೀರು ಪೂರೈಕೆ ಸೌಲಭ್ಯವನ್ನು ಕಡಿತಗೊಳಿಸಲಾಗಿದೆ. ಕುಡಿಯುವ ನೀರಿನ ಪೂರೈಕೆಗೆ ಮಾತ್ರ ಈಗ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಮಹಾರಾಷ್ಟ್ರ ಜಲ ಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ತಿಳಿಸಿದ್ದಾರೆ.