
ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಿಮಿತ್ತ ಶನಿವಾರ ಬೆಳಗ್ಗೆಯಿಂದ ನಡೆಯುತ್ತಿರುವ 5ನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಮೊದಲ ನಾಲ್ಕು ಗಂಟೆ ಅವಧಿಯಲ್ಲಿ ಶೇ.38ರಷ್ಟು ಮತದಾನವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಬೆಳಗ್ಗೆ 7 ಗಂಟೆಯಿಂದಲೇ ಒಟ್ಟು 53 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ನಾಲ್ಕು ಗಂಟೆಯಲ್ಲಿ ಶೇ.38ರಷ್ಚು ಮತದಾನವಾಗಿದೆ ಎಂದು ತಿಳಿದುಬಂದಿದೆ. ಒಟ್ಟು 53 ಸ್ಥಾನಗಳಿಗಾಗಿ ಪಶ್ಚಿಮಬಂಗಾಳದ 24 ಪರಗಣದ ದಕ್ಷಿಣ, ಹೂಗ್ಲಿ ಮತ್ತು ದಕ್ಷಿಣ ಕೋಲ್ಕಾತದಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಈ ಪೈಕಿ 24 ಪರಗಣ ದಕ್ಷಿಣದಲ್ಲಿ 31 ವಿಧಾನಸಭಾ ಕ್ಷೇತ್ರಗಳಿದ್ದು, ಹೂಗ್ಲಿಯಲ್ಲಿ 18 ಮತ್ತು ಕೋಲ್ಕತಾ ದಕ್ಷಿಣ ಭಾಗದ ನಾಲ್ಕು ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಎಲ್ಲ 53 ಕ್ಷೇತ್ರಗಳಲ್ಲಿ ಮತದಾನ ಶಾಂತಿಯುತವಾಗಿ ಸಾಗುತ್ತಿದ್ದು, ಕೆಲ ಕ್ಷೇತ್ರಗಳಲ್ಲಿ ಕಾಂಗ್ರಸ್ ಮತ್ತು ಸಿಪಿಐ(ಎಂ) ಪಕ್ಷಗಳು ಟಿಎಂಸಿ ಮತದಾರನ್ನು ಓಲೈಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ ಎಂದು ಹೇಳಿದೆ.
ಇನ್ನು 24 ಪರಗಣ ದಕ್ಷಿಣ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಸೊನಾಲಿ ಗುಹಾ ಅವರು ಸಿಪಿಐ(ಎಂ) ಕಾರ್ಯಕರ್ತನನ್ನು ಮತಗಟ್ಟೆಯಿಂದ ಹೊರದಬ್ಬುವಂತೆ ಮೊಬೈಲ್ ನಲ್ಲಿ ಹೇಳುತ್ತಿದ್ದ ದೃಶ್ಯ ಮಾಧ್ಯಮಗಳಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಸ್ಥಳೀಯ ಚುನಾವಣಾಧಿಕಾರಿ ಹೇಳಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಮತಯಂತ್ರಗಳಲ್ಲಿ ಲೋಪದೋಷಗಳು ಕಂಡುಬಂದ ಹಿನ್ನಲೆಯಲ್ಲಿ ಮತದಾನ ಪ್ರಕ್ರಿಯೆ ತಡವಾಗಿ ಆರಂಭವಾದ ಘಟನೆ ಕೂಡ ನಡೆದಿದೆ.
ಈ ಒಟ್ಟು 53 ಕ್ಷೇತ್ರಗಳಲ್ಲಿ 1.24 ಕೋಟಿ ಮತದಾರರಿದ್ದು, ವಿವಿಧ ಪಕ್ಷಗಳ 349 ಅಭ್ಯರ್ಥಿಗಳ ಭವಿಷ್ಯ ಇಂದು ಮತಪೆಟ್ಟಿಗೆ ಸೇರಲಿದೆ. ಈ ಪೈಕಿ 43 ಮಹಿಳಾ ಅಭ್ಯರ್ಥಿಗಳು ಕೂಡ ಸೇರಿದ್ದಾರೆ. ಮತದಾನಕ್ಕಾಗಿ ಒಟ್ಟು 14, 642 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ 1075 ಮಾದರಿ ಮತಗಟ್ಟೆಗಳು ಕೂಡ ಒಳಗೊಂಡಿವೆ. ಇದಲ್ಲದೆ ಪ್ರತ್ಯೇಕವಾಗಿ 390 ಮಹಿಳಾ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇನ್ನು ಮತದಾನಕ್ಕೆ ಹಲವು ಪ್ರದೇಶಗಳಲ್ಲಿ ನಕ್ಸಲ್ ದಾಳಿ ಆತಂಕವಿರುವ ಕಾರಣ ವ್ಯಾಪಕ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಭದ್ರತಾ ಪಡೆಯ ಸುಮಾರು 680 ಪೊಲೀಸ್ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದ್ದು, ಒಟ್ಟು 22 ಸಾವಿರ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ತುರ್ತು ಪ್ರಹಾರ ದಳ, ಅಶ್ರುವಾಯುದಳಗಳನ್ನು ಕೂಡ ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
Advertisement