ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ದೆಹಲಿಯ ಕೆಂಪು ಕೋಟೆ ಮೈದಾನದ ವೇದಿಕೆ ಮೇಲೆ ನಿಂತು ದೇಶದ ಪ್ರಧಾನ ಮಂತ್ರಿ ಏನು ಮಾತನಾಡುತ್ತಾರೆ ಎಂದು ಎಲ್ಲರೂ ಕಾತರದಿಂದ ಕಾಯುತ್ತಿರುತ್ತಾರೆ. ದೇಶದ ಜನತೆಗೆ ಹೇಳಬೇಕಾಗಿರುವುದನ್ನು ಅವರು ಹೇಳುವ ದಿನವಿದು. ಹಲವು ಯೋಜನೆಗಳನ್ನು ಪ್ರಕಟಿಸುವ ದಿನವಿದು.
ತಮ್ಮ ಭಾಷಣದಲ್ಲಿ ಒತ್ತು ನೀಡಬೇಕಾದ ವಿಷಯಗಳು ಮತ್ತು ಉದ್ದೇಶಗಳು ಏನು ಎಂಬುದನ್ನು ತಿಳಿಸಲು ದೇಶದ ಜನತೆಗೆ ಸೂಚಿಸಿದ್ದರು. ಜನರು ತಮ್ಮ ಅಭಿಪ್ರಾಯಗಳನ್ನು MyGov ವೆಬ್ ಸೈಟ್ ಮತ್ತು ಅಪ್ಲಿಕೇಶನ್ ನಲ್ಲಿ ಕಳುಹಿಸಬಹುದು ಎಂದು ಸೂಚಿಸಲಾಗಿತ್ತು.
ಅದರಂತೆ ದೇಶದ ವಿವಿಧ ಕ್ಷೇತ್ರಗಳ ನಾಗರಿಕರು ಸರ್ಕಾರದ ಆಡಳಿತ, ಅಭಿವೃದ್ಧಿ ಯೋಜನೆಗಳು, ಆರೋಗ್ಯ, ಆರ್ಥಿಕತೆ, ಆಂತರಿಕ ಭದ್ರತೆ, ಅಸಹಿಷ್ಣುತೆ ವಿಚಾರಗಳು, ಡಿಜಿಟಲ್ ಇಂಡಿಯಾ, ಶಿಕ್ಷಣ ಮೊದಲಾದ ವಿಷಯಗಳನ್ನು ಪ್ರಸ್ತಾಪಿಸಬೇಕೆಂದು ಸೂಚಿಸಿದ್ದಾರೆ.
ಶೇಕಡಾ 19.8 ಜನರು ಅಸಹಿಷ್ಣುತೆ ವಿಚಾರವಾಗಿ ಹೇಳಬೇಕೆಂದು ಅದು ಮೊದಲ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನದಲ್ಲಿ ಶಿಕ್ಷಣಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಪ್ರಧಾನಿಯವರು ಮಾತನಾಡಬೇಕೆಂದಿದ್ದಾರೆ. ನಂತರ ಹವಾಮಾನ ವೈಪರೀತ್ಯ, ಮಹಿಳೆಯರ ಭದ್ರತೆ, ಆಂತರಿಕ ಭದ್ರತೆ, ಸರ್ಕಾರದ ಆಡಳಿತ, ಡಿಜಿಟಲ್ ಇಂಡಿಯಾ ಮೊದಲಾದ ವಿಷಯಗಳ ಕುರಿತು ಸರ್ಕಾರದ ಯೋಜನೆಗಳು, ನಿರ್ಣಯಗಳನ್ನು ಪ್ರಧಾನಿಯವರು ಪ್ರಸ್ತಾಪಿಸಬೇಕೆಂದು ದೇಶವಾಸಿಗಳು ಹೇಳಿದ್ದಾರೆ.