ಭಯೋತ್ಪಾದನೆ ಕುರಿತು ಮಾತ್ರ ಮಾತುಕತೆಗೆ ಸಿದ್ಧ: ಪಾಕ್ ಆಹ್ವಾನಕ್ಕೆ ಭಾರತ ಪ್ರತಿಕ್ರಿಯೆ

ನೆರೆ ರಾಷ್ಟ್ರ ಪಾಕಿಸ್ತಾನದೊಂದಿಗಿನ ಮಾತುಕತೆಗೆ ಸಿದ್ಧವಿದ್ದು, ಕೇವಲ ಭಯೋತ್ಪಾದನೆ ಕುರಿತು ಮಾತ್ರ ಮಾತುಕತೆ ನಡೆಸುವುದಾಗಿ ಭಾರತ ಪಾಕಿಸ್ತಾನಕ್ಕೆ ಗುರುವಾರ ತಿಳಿಸಿದೆ...
ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್
ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್

ನವದೆಹಲಿ: ನೆರೆ ರಾಷ್ಟ್ರ ಪಾಕಿಸ್ತಾನದೊಂದಿಗಿನ ಮಾತುಕತೆಗೆ ಸಿದ್ಧವಿದ್ದು, ಕೇವಲ ಭಯೋತ್ಪಾದನೆ ಕುರಿತು ಮಾತ್ರ ಮಾತುಕತೆ ನಡೆಸುವುದಾಗಿ ಭಾರತ ಪಾಕಿಸ್ತಾನಕ್ಕೆ ಗುರುವಾರ ತಿಳಿಸಿದೆ.

ಈ ಕುರಿತಂತೆ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಅವರು ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿಗೆ ಪತ್ರವೊಂದನ್ನು ಬರೆದಿದ್ದು, ಭಯೋತ್ಪಾದನೆ ವಿಚಾರ ಅತ್ಯಂತ ಪ್ರಮುಖ ವಿಚಾರವಾಗಿದೆ. ಗಡಿಭಾಗದಲ್ಲಿ ಭಯೋತ್ಪಾದನಾ ಚಟುವಟಿಕೆ ಹೆಚ್ಚಾಗಿದ್ದು, ಭಯೋತ್ಪಾದನೆ ಕುರಿತಂತೆ ಮಾತ್ರ ಮಾತನಾಡಲು ಭಾರತ ಸಿದ್ಧವಿದೆ ಎಂದು ಹೇಳಿದ್ದಾರೆ.

ಜೈಶಂಕರ್ ಅವರು ಬರೆದಿರುವ ಪತ್ರವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಪರಿಶೀಲನೆ ನಡೆಸಿದ್ದು, ನಂತರವಷ್ಠೇ ಪತ್ರವನ್ನು ಪಾಕಿಸ್ತಾನ ವಿದೇಶಾಂಗ ಕಚೇರಿಗೆ ಕಳುಹಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಭಾರತ ಕಳುಹಿಸಿರುವ ಈ ಪತ್ರವನ್ನು ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ರಾಯಭಾರಿ ಗೌರಮ್ ಬಾಂಬವಾಲೆ ಅವರು ನಿನ್ನೆಯಷ್ಟೇ ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿಗೆ ಹಸ್ತಾಂತರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಆ.15 ರಂದು ಭಾರತಕ್ಕೆ ಪತ್ರವೊಂದನ್ನು ಬರೆದಿದ್ದರು. ಪತ್ರದಲ್ಲಿ ಕಾಶ್ಮೀರ ಕುರಿತಂತೆ ಮಾತುಕತೆಗೆ ಆಹ್ವಾನಿಸಿದ್ದರು. ಆದರೆ, ಪಾಕಿಸ್ತಾನದ ಈ ಆಹ್ವಾನವನ್ನು ತಿರಸ್ಕರಿಸಿದ್ದ ಭಾರತ, ಕೇವಲ ಭಯೋತ್ಪಾದನೆ ಕುರಿತಂತೆ ಮಾತ್ರ ಮಾತುಕತೆ ನಡೆಸಲು ಭಾರತ ಸಿದ್ಧವಿದೆ ಎಂದು ಹೇಳಿತ್ತು.

ಇದಾದ ಬಳಿಕ ಮತ್ತೆ ಆ.19 ರಂದು ಇಂತಹದ್ದೇ ಮತ್ತೊಂದು ಪತ್ರವನ್ನು ಬರೆದಿದ್ದ ಪಾಕಿಸ್ತಾನ ಮತ್ತೆ ಮಾತುಕತೆಗೆ ಆಹ್ವಾನಿಸಿತ್ತು. ಈ ಆಹ್ವಾನಕ್ಕೆ ಇದೀಗ ಭಾರತ ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ವಿಚಾರ ಹೊರತು ಪಡಿಸಿ, ಭಯೋತ್ಪಾದನಾ ವಿಚಾರ ಕುರಿತಂತೆ ಮಾತ್ರ ಮಾತುಕತೆ ನಡೆಸಲು ಭಾರತ ತಯಾರಿದೆ ಎಂದು ಸ್ಪಷ್ಟವಾಗಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com