
ಶ್ರೀನಗರ: ಕಾಶ್ಮೀರ ಸಮಸ್ಯೆ ಕುರಿತಂತೆ ಭಾರತದೊಂದಿಗೆ ಷರತ್ತು ರಹಿತ ಚರ್ಚೆ ನಡೆಸಲು ಸಿದ್ಧರಿದ್ದೇವೆಂದು ತೆಹ್ರೀಕ್-ಇ- ಹುರಿಯತ್ ಸಂಘಟನೆ ಶನಿವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಹುರಿಯತ್ ಹಿರಿಯ ನಾಯಕ ಇಂಜಿನಿಯರ್ ಹಿಲಾಲ್ ಅಹ್ಮದ್ ವಾರ್, ಕಾಶ್ಮೀರ ವಿವಾದ ಕುರಿತಂತೆ ಭಾರತ ಮತ್ತು ಅದರ ನಾಯಕರು ಇಂದು ಕಣ್ಣು ತೆರೆಯಬೇಕಾದ ಸಮಯ ಬಂದಿದೆ. ಕಾಶ್ಮೀರ ಸಮಸ್ಯೆ ಕುರಿತಂತೆ ಅಲ್ಲಿನ ಜನರು ಇಂದು ಬೀದಿಗೆ ಬಂದಿದ್ದಾರೆ. ಸಮಸ್ಯೆಗೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಎದುರು ನೋಡುತ್ತಿದ್ದಾರೆ. ಹೀಗಾಗಿ ಹುರಿಯತ್ ಕಾನ್ಫೆರೆನ್ಸ್ ಜೊತೆಗೆ ಭಾರತದ ನಾಯಕರು ಮಾತುಕತೆ ನಡೆಸಬೇಕಿದೆ ಎಂದು ಹೇಳಿದ್ದಾರೆ.
ಕಾಶ್ಮೀರ ಸಮಸ್ಯೆ ಬಗ್ಗೆ ಭಾರತದೊಂದಿಗೆ ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆ. ಆದರೆ, ಭಾರತ ಸರ್ಕಾರದ ಸಂವಿಧಾನ ಪ್ರಕ್ರಿಯೆಯಂತೆ ಮಾತುಕತೆ ನಡೆಸಲು ನಾವು ಸಿದ್ಧರಿಲ್ಲ. ಸಂವಿಧಾನವನ್ನು ಹೊರತು ಪಡಿಸಿದರೆ ಹಾಗೂ ಷರತ್ತು ರಹಿತವಿದ್ದರೆ ಮಾತ್ರ ನಾವು ಮಾತುಕತೆ ನಡೆಸುತ್ತೇವೆಂದು ಹೇಳಿದ್ದಾರೆ.
ಈ ಹಿಂದೆಯಷ್ಟೇ ಕಾಶ್ಮೀರ ಹಿಂಸಾಚಾರ ಕುರಿತಂತೆ ಮಾತನಾಡಿದ್ದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದರು. ಪಾಕಿಸ್ತಾನದ ಜೊತೆಗೆ ಉತ್ತಮ ಬಾಂಧವ್ಯ ಹೊಂದಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸತತವಾಗಿ ಯತ್ನ ನಡೆಸುತ್ತಿದ್ದಾರೆ. ಆದರೆ, ಪಾಕಿಸ್ತಾನ ಮಾತ್ರ ತನ್ನ ಭಯೋತ್ಪಾದನೆಯನ್ನು ಮುಂದುವರೆಸುವ ಮೂಲಕ ಉತ್ತರ ನೀಡುತ್ತಿದೆ.
ಇದಕ್ಕೆ ಕಾಶ್ಮೀರ ಸೃಷ್ಟಿಯಾಗಿರುವ ಹಿಂಸಾಚಾರಕ್ಕೆ ಬಹಿಂರಂಗವಾಗಿಯೇ ಬೆಂಬಲ ನೀಡುತ್ತಿದೆ. ಕಾಶ್ಮೀರ ವಿಚಾರವಾಗಿ ಪದೇಪದೇ ನಮ್ಮನ್ನು ಕೆಣಕಬೇಡಿ. ಅದು ನಿಮಗೆ ಒಳ್ಳೆಯದಲ್ಲ ಎಂದು ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಹುರಿಯತ್ ನಾಯಕರು ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆ.
Advertisement