ಪ.ಬಂಗಾಳದಲ್ಲಿ ನಿಯೋಜಿಸಿದ್ದ ಸೇನೆ ವಾಪಸ್; 72 ಗಂಟೆಗಳ ಹೈ ಡ್ರಾಮಾ ಅಂತ್ಯ!

ಸೇನೆ ನಿಯೋಜನೆ ಕುರಿತಂತೆ ಪಶ್ಚಿಮ ಬಂಗಾಳದಲ್ಲಿ ಆರಂಭವಾಗಿದ್ದ ಹೈ ಡ್ರಾಮಾ ಕೊನೆಗೂ 72 ಗಂಟೆಗಳ ಬಳಿಕ ಶನಿವಾರ ಅಂತ್ಯಗೊಂಡಿದೆ...
ಪಶ್ಚಿಮ ಬಂಗಾಳದಲ್ಲಿ ಬುರ್ದ್ವಾನ್ ಜಿಲ್ಲೆಯ ಪಲ್ಸಿತ್ ಟೋಲ್ ಪ್ಲಾಜಾ ಬಳಿ ವಾಹನಗಳನ್ನು ತಪಾಸಣೆ ವೇಳೆ ಸ್ಥಳದಲ್ಲಿರುವ ಭಾರತೀಯ ಸೇನೆ
ಪಶ್ಚಿಮ ಬಂಗಾಳದಲ್ಲಿ ಬುರ್ದ್ವಾನ್ ಜಿಲ್ಲೆಯ ಪಲ್ಸಿತ್ ಟೋಲ್ ಪ್ಲಾಜಾ ಬಳಿ ವಾಹನಗಳನ್ನು ತಪಾಸಣೆ ವೇಳೆ ಸ್ಥಳದಲ್ಲಿರುವ ಭಾರತೀಯ ಸೇನೆ

ಕೋಲ್ಕತಾ: ಸೇನೆ ನಿಯೋಜನೆ ಕುರಿತಂತೆ ಪಶ್ಚಿಮ ಬಂಗಾಳದಲ್ಲಿ ಆರಂಭವಾಗಿದ್ದ ಹೈ ಡ್ರಾಮಾ ಕೊನೆಗೂ 72 ಗಂಟೆಗಳ ಬಳಿಕ ಶನಿವಾರ ಅಂತ್ಯಗೊಂಡಿದೆ.

ಪಶ್ಚಿಮ ಬಂಗಾಳದ ಟೋಲ್ ಪ್ಲಾಜಾಗಳಲ್ಲಿ ಅಭ್ಯಾಸ ನಡೆಸುತ್ತಿದ್ದ ಸೇನಾ ಪಡೆಗಳನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಕರೆಯುವ ಮುಖಾಂತರ ಆರಂಭವಾಗಿದ್ದ ಹೈ ಡ್ರಾಮಾವೊಂದಕ್ಕೆ ಅಂತ್ಯ ಹಾಡಿದೆ.

72 ಗಂಟೆಗಳ ಅಭ್ಯಾಸ ಇದೀಗ ಅಂತ್ಯಗೊಂಡಿದ್ದು, ಪಲ್ಹಿತ್ ಟೋಲ್ ಪ್ಲಾಜಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಿಯೋಜನೆಗೊಳಿಸಲಾಗಿದ್ದ ಸೇನಾ ಪಡೆಗಳನ್ನು ಹಿಂದಕ್ಕೆ ಬರುವಂತೆ ಸೂಚನೆ ನೀಡಲಾಗಿದೆ ಎಂದು ವಿಂಗ್ ಕಮಾಂಡರ್ ಎಸ್.ಎಸ್. ಬಿರ್ಡಿ ಅವರು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಟೋಲ್ ಪ್ಲಾಜಾ ಗಳಲ್ಲಿ ಸೇನೆಯನ್ನು ನಿಯೋಜಿಸಿದ್ದ ಕಾರಣಕ್ಕೆ ತೀವ್ರವಾಗಿ ಕೆಂಡಾಮಂಡಲವಾಗಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ತಮ್ಮ ಕಚೇರಿಯಲ್ಲಿಯೇ 36 ಗಂಟೆಗಳ ಕಾಲ ಕುಳಿತು ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದ್ದರು. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡದೆಯೇ ಸೇನಾ ಪಡೆಗಳನ್ನು ನಿಯೋಜನೆಗೊಳಿಸಿದ್ದು, ಇದೊಂದು ಕರಾಳ ದಿನವಾಗಿದೆ. ಪ್ರಜಾಪ್ರಭುತ್ವಕ್ಕಾಗಿ ಕಚೇರಿಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸುತ್ತೇನೆಂದು ಹೇಳಿದ್ದರು.

ಇದಕ್ಕೆ ಸ್ಪಷ್ಟನೆ ನೀಡಿದ್ದ ಸೇನೆ, ಕೋಲ್ಕತಾ ಪೊಲೀಸರೊಂದಿಗೆ ಸುದೀರ್ಘವಾಗಿ ಸಂಪರ್ಕದಲ್ಲಿದ್ದೇವೆ. ರಾಷ್ಟ್ರೀಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿನ ಉಪಯೋಗಕ್ಕಾಗಿ ಭಾರೀ ವಾಹನಗಳ ಕುರಿತ ಮಾಹಿತಿ ಸಂಗ್ರಹಿಸಲು ಈ ಕ್ರಮವನ್ನು ಕೈಗೊಳ್ಳಲಾಗಿತ್ತು. ಕಳೆದ ತಿಂಗಳು ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಾಂಜ್ ರಾಜ್ಯಗಳಲ್ಲೂ ಇದೇ ರೀತಿ ಸೇನೆಯನ್ನು ನಿಯೋಜಿಸಲಾಗಿತ್ತು. ಈ ಬಾರಿ ಪಶ್ಚಿಮ ಬಂಗಾಳದ ಜತೆಗೆ ಅರುಣಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್, ತ್ರಿಪು, ಮೇಘಾಲಯ ಮತ್ತು ಮಿಜೋರಾಂ ಗಳಲ್ಲಿ ಅಭ್ಯಾಸ ಕೈಗೊಳ್ಳಲಾಗಿದೆ ಎಂದು ತಿಳಿಸಿತು.

ವಾಸ್ತವವಾಗಿ ಸೇನೆಯು ಈ ಅಭ್ಯಾಸವನ್ನು ನವೆಂಬರ್ 28 ರಿಂದ 30ರವರೆಗೆ ಕೈಗೊಳ್ಳಲು ಉದ್ದೇಶಿಸಲಾಗಿತ್ತು. ಆದರೆ, ಅಂದು ನೋಟುಗಳ ರದ್ದು ವಿರೋಧಿಸಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ ಕೋಲ್ಕತಾ ಪೊಲೀಸರ ಮನವಿ ಮೇರೆಗೆ ಮುಂದೂಡಲಾಗಿತ್ತು ಎಂದು ಸ್ಫಷ್ಟನೆ ನೀಡಿತು.

ಸೇನೆ ನಿಯೋಜನೆ ಕುರಿತಂತೆ ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕರು ಪಶ್ಚಿಮ ಬಂಗಾಳದ ರಾಜ್ ಭವನದ ಎದುರು ಪ್ರತಿಭಟನೆ ನಡೆಸಿದ್ದರು, ಸೇನೆ ಪಡೆಯನ್ನು ಕೂಡಲೇ ಹಿಂದಕ್ಕೆ ಕರೆಯುವಂತೆ ಆಗ್ರಹಿಸಿದ್ದವು.
 
ಮಮತಾ ಬ್ಯಾನರ್ಜಿಯವರ ಈ ವಿರೋಧಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಮತಾ ಬಾನರ್ಜಿಯವರು ಸೇನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದ್ದು, ಕೂಡಲೇ ಕ್ಷಮೆಯಾಚಿಸುವಂತೆ ಆಗ್ರಹಿಸುತ್ತಿವೆ.

ಈ ಕುರಿತಂತೆ ಮಾತನಾಡಿರುವ ಬಿಜೆಪಿ ವಕ್ತಾರ ಸಿದ್ಧಾರ್ಥ್ ನಾಥ್ ಸಿಂಗ್ ಅವರು, ದುಬಾರಿ ನೋಟುಗಳ ನಿಷೇಧ ಹೇರಿದ ಬಳಿಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಪ್ರತಿಭಟನೆ ನಡೆಸುತ್ತಿರುವ ರೀತಿ ಸರಿಯಾದುದಲ್ಲ. ಸೇನೆ ನಿಯೋಜನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ನಿಜಕ್ಕೂ ದೂರಾದೃಷ್ಟಕರ ಸಂಗತಿ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com