
ಚೆನ್ನೈ: ಎಐಎಡಿಎಂಕೆ ಪಕ್ಷದ ಅಧಿನಾಯಕಿ ಜಯಲಲಿತಾ ಅವರ ಚುನಾವಣಾ ಸೋಲಿಗೆ ನಾನೇ ಕಾರಣನಾಗಿದ್ದೆ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.
ಜಯಲಲಿತಾ ಅವರ ನಿಧನ ಹಿನ್ನಲೆಯಲ್ಲಿ ದಕ್ಷಿಣ ಭಾರತದ ಕಲಾವಿದರ ಸಂಘದ ವತಿಯಿಂದ ಭಾನುವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ರಜನಿಕಾಂತ್ ಅವರು 1996 ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ನೆನೆದರು. "1996ರ ವಿಧಾನಸಭಾ ಚುನಾವಣೆಯಲ್ಲಿ ಜಯಲಲಿತಾ ಮತ್ತು ಅವರ ಪಕ್ಷದ ಸೋಲಿಗೆ ನಾನೂ ಕೂಡ ಕಾರಣನಾಗಿದ್ದೆ. ನಾನು ಜಯಾ ವಿರುದ್ಧ ನೀಡಿದ್ದ ಒಂದು ಹೇಳಿಕೆ ಜಯಲಲಿತಾರನ್ನು ತೀವ್ರ ಕಳವಳಕ್ಕೆ ಈಡುಮಾಡಿತ್ತು ಎಂದು ಹೇಳಿದ್ದಾರೆ.
ಇಷ್ಟಾದರೂ ನಾನು ನನ್ನ ಮಗಳ ಮದುವೆ ಸಮಾರಂಭಕ್ಕಾಗಿ ಅವರನ್ನು ಆಹ್ವಾನಿಸಲು ಹೋಗಿದ್ದೆ. ನನ್ನ ಹೇಳಿಕೆಯಿಂದ ಜಯ ಲಲಿತಾ ಕೋಪಗೊಂಡಿರುತ್ತಾರೆ ಮದುವೆಗೆ ಬರಲು ನಿರಾಕರಿಸುತ್ತಾರೆ ಎಂದು ಭಾವಿಸಿದ್ದೆ. ಆದರೆ ಅದರೆ ನನ್ನ ಭೇಟಿಗೆ ಸಮಯ ನೀಡಿದ್ದಷ್ಟೇ ಆಹ್ವಾನ ಸ್ವೀಕರಿಸಿದ ಜಯಾ ಅಂದು ಕಾರ್ಯಕರ್ತರೊಬ್ಬರ ವಿವಾಹ ಕೂಡ ಅಂದೇ ಇದೆ. ಆದರೂ ಅಲ್ಲಿಗೂ ತೆರಳಿ ಬಳಿಕ ಮದುವೆಗೆ ಬರುವುದಾಗಿ ಆಶ್ವಾಸನೆ ನೀಡಿದರು ಮತ್ತು ನನ್ನ ಮಗಳ ಮದುವೆಗೂ ಆಗಮಿಸಿ ಆಶೀರ್ವದಿಸಿದ್ದರು. ಅಂತಹ ಚಿನ್ನದಂತ ಮಹಿಳೆ ಜಯಲಲಿತಾ. ಅತಂಹ ನಾಯಕಿ ನಮ್ಮೊಂದಿಗಿಲ್ಲ. ಸೋಲನ್ನು ಜಯದ ಮೆಟ್ಟಿಲಾಗಿಸಿಕೊಂಡ ಧೀರಮಹಿಳೆ ಜಯಾ, ಪುರುಷ ಪ್ರಧಾನ ಸಮಾಜದ ನಡುವೆಯೂ ಒತ್ತಡಗಳನ್ನು ಸಮರ್ಥವಾಗಿ ಎದುರಿಸಿ ವಜ್ರದಂತೆ ಹೊಳೆದರು. ಇದೀಗ ಎಂಜಿಆರ್ ಸಮಾಧಿ ಬಳಿ ಕೊಹಿನೂರ್ ವಜ್ರ ಶಾಶ್ವತ ನಿದ್ರೆಗೆ ಜಾರಿದ್ದಾರೆ ಎಂದು ರಜನಿಕಾತ್ ಹೇಳಿದರು.
1996ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ವೇಳೆ ಎಐಎಡಿಎಂಕೆ ಪಕ್ಷ ಹಾಗೂ ಜಯಲಲಿತಾ ಅವರ ವಿರುದ್ಧ ಮಾತನಾಡಿದ್ದ ರಜನಿಕಾಂತ್ ಅವರು "ಜಯಲಲಿತಾ ಅವರಿಗೆ ಅಧಿಕಾರ ನೀಡಿದರೆ ತಮಿಳುನಾಡನ್ನು ಆ ದೇವರು ಕೂಡ ರಕ್ಷಿಸಲಾರ ಎಂದು ಹೇಳಿದ್ದರು. ಈ ಹೇಳಿಕೆ ಅಂದಿನ ಪರಿಸ್ಥಿತಿಯಲ್ಲಿ ವ್ಯಾಪಕ ಪರಿಣಾಮ ಬೀರಿತ್ತು. ಒಂದು ಅರ್ಥದಲ್ಲಿ ಈ ಹೇಳಿಕೆಯಿಂದಲೇ ಇಡೀ ಚುನಾವಣೆಯ ದಿಕ್ಕೇ ಬದಲಾಗಿ ಡಿಎಂಕೆ ಪಕ್ಷ ಗೆಲುವು ಸಾಧಿಸಿತ್ತು.
Advertisement