

ನವದೆಹಲಿ: ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕಪ್ಪುಹಣಕ್ಕೆ ಅವಕಾಶ ಮಾಡಿಕೊಟ್ಟಿದ್ದ ಕಾಂಗ್ರೆಸ್ ಗೆ ಕೇಂದ್ರದ ನೋಟು ನಿಷೇಧ ನಿರ್ಧಾರವನ್ನು ಟೀಕಿಸುವ ನೈತಿಕ ಹಕ್ಕಿಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಮಂಗಳವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಕಾಂಗ್ರೆಸ್ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ದೇಶವನ್ನು ಕೊಳ್ಳೆ ಹೊಡೆದಿರುವ ಕಾಂಗ್ರೆಸ್ ಮೇಲೆ ಒಬ್ಬ ವ್ಯಕ್ತಿಗೂ ಕೂಡ ನಂಬಿಕೆಯಿಲ್ಲ. ದೇಶದಲ್ಲಿ ಇಂದು ಏನಾಗುತ್ತಿದೆಯೇ ಆ ಪರಿಸ್ಥಿತಿಯನ್ನು ಸೃಷ್ಟಿಸಿದ್ದೇ ಕಾಂಗ್ರೆಸ್. ದೇಶವನ್ನು ಕಾಂಗ್ರೆಸ್ ದುರ್ಬಳಕೆ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.
ಕಪ್ಪುಹಣ ನಿಯಂತ್ರಿಸಲು ಕಾಂಗ್ರೆಸ್ ಏನು ಮಾಡಿದೆ. ಕಪ್ಪುಹಣ ನಿಯಂತ್ರಣ ಕುರಿತಂತೆ ಎಸ್ಐಟಿ ರಚಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದ್ದರೂ. ಯಾವುದೇ ಕ್ರಮ ಕೈಗೊಳ್ಳಲಿಲ್ಲವೇಕೆ? ಆರ್ಥಿಕ ಸಂಕಷ್ಟ ಎಂಬುದು ವರ್ಷದಿಂದ ವರ್ಷಕ್ಕೆ ಯಾವ ಕಾರಣಕ್ಕೆ ಹೆಚ್ಚಾಯಿತು? ಇದಕ್ಕೆಲ್ಲಾ ಕಾರಣ ಕಾಂಗ್ರೆಸ್ ನಡೆಸಿದ ಆಡಳಿತ. ದೇಶಕ್ಕೆ ಹಗರಣಗಳ ಕೊಡುಗೆ ನೀಡಿದರ ಪರಿಣಾಮವಾಗಿದೆ. ದೇಶವನ್ನು ಭ್ರಷ್ಟಾಚಾರವೆಂಬ ಕೂಪಕ್ಕೆ ಕಾಂಗ್ರೆಸ್ ತಳ್ಳಿದೆ ಎಂದು ತಿಳಿಸಿದ್ದಾರೆ.
ಇಷ್ಟೆಲ್ಲಾ ಮಾಡಿರುವ ಕಾಂಗ್ರೆಸ್ ಗೆ ಕೇಂದ್ರ ನೋಟು ನಿಷೇಧ ನಿರ್ಧಾರವನ್ನು ಪ್ರಶ್ನೆ ಮಾಡುವ ಹಾಗೂ ಟೀಕೆ ವ್ಯಕ್ತಪಡಿಸುವ ನೈತಿಕ ಹಕ್ಕಿಲ್ಲ. ಕೇವಲ ಎರಡು ವರ್ಷದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಆರ್ಥಿಕತೆಯ ವರ್ಚಸ್ಸನ್ನು ಬದಲಿಸಿದ್ದಾರೆ. ಅಂತರಾಷ್ಟ್ರೀಯ ಸಮುದಾಯದಲ್ಲಿ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆಂದು ಹೇಳಿದ್ದಾರೆ.
ಇದೇ ವೇಳೆ ವಿರೋಧ ಪಕ್ಷಗಳ ಗದ್ದಲಕ್ಕೆ ಸಂಸತ್ತು ಕಲಾಪ ಬಲಿಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರವಾಗಿ ಕಿಡಿಕಾರಿದ ಅವರು, ಕಾಂಗ್ರೆಸ್ ಹಾಗೂ ಅದರ ಸ್ನೇಹಿತರು ಸಂಸತ್ತು ಕಲಾಪ ನಡೆಯದಂತೆ ಮಾಡಿದರು. ಭಾರತ್ ಬಂದ್ ಗೆ ಕಾಂಗ್ರೆಸ್ ಕರೆ ನೀಡಿತ್ತು. ಆದರೆ, ಪ್ರತಿಭಟನೆಯಿಂದ ಯಾವುದೇ ಫಲ ದೊರಕದೆ ವಿಫಲವಾಯಿತು. ಆಕ್ರೋಶ್ ದಿನಕ್ಕೆ ಕರೆ ನೀಡಿತ್ತು. ಇದೂ ಕೂಡ ವಿಫಲವಾಯಿತು. ಚರ್ಚೆ ಬೇಕೆಂದು ಹೇಳಿದಿರು, ಚರ್ಚೆ ನಡೆಸಲು ಸರ್ಕಾರ ಸಿದ್ಧವಿದ್ದರೂ, ಚರ್ಚೆಯಿಂದ ಓಡಿಹೋದಿರಿ ಎಂದು ತಿಳಿಸಿದ್ದಾರೆ.
ನೋಟಿ ನಿಷೇಧದಿಂದ ಕೆಲ ಸಮಸ್ಯೆಗಳು ಎದುರಾಗಿರಬಹುದು. ಆದರೆ, ಸಹಿಸಿಕೊಂಡ ಸಂಕಷ್ಟ ಹಾಗೂ ಜನರ ತಾಳ್ಮೆ ಮುಂದಿನ ದಿನಗಳಲ್ಲಿ ಉತ್ತಮವಾದ ಫಲ ನೀಡಲಿದೆ. ಜನರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೇಲೆ ನಂಬಿಕೆಯಿದ್ದು, ಮುಂದಿನ ದಿನಗಳಲ್ಲು ಉತ್ತಮ ನಿರ್ಧಾರ ತೆಗೆದುಕೊಂಡಿದ್ದೆವೆಂಬ ಭಾವನೆ ಹುಟ್ಟಲಿದೆ ಎಂದು ಹೇಳಿದ್ದಾರೆ.
Advertisement