ಬ್ರಾಹ್ಮಣ ವರನನ್ನು ಕೈಹಿಡಿದ ಪುತ್ರಿ: ಸಚಿವರ ಮೇಲೆ ನಿಷೇಧ ಹೇರಿಕೆ..!
ಬಾಲಸೋರ್: ಒಡಿಶಾ ಬುಡಕಟ್ಟು ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಸಚಿವರ ಮಗಳೊಬ್ಬಳು ಬ್ರಾಹ್ಮಣನೊಬ್ಬನನ್ನು ಮದುವೆಯಾದ ಕಾರಣಕ್ಕೆ ಇದೀಗ ಸಮುದಾಯದ ಜನರು ಸಚಿವರನ್ನೇ ತಮ್ಮ ಸಮುದಾಯದಿಂದ ಬಹಿಷ್ಕರಿಸುವ ತೀರ್ಮಾನಕ್ಕೆ ಬಂದಿದ್ದಾರೆ.
ಬುಡಕಟ್ಟು ಕಲ್ಯಾಣ ಸಚಿವ ಸುದಾಮ್ ಮರಾಂಡಿ ಬಹಿಷ್ಕಾರ ಎದುರಿಸುತ್ತಿರುವ ಸಚಿವರಾಗಿದ್ದು, ಸುದಾಮ್ ಅವರು ಸಂಥಾಲ್ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ. ಇವರ ಮಗಳು ಸಂಜಿವಾಣಿ ವೃತ್ತಿಯಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆಷ್ಟೇ ಸಂಜಿವಾಣಿಯವರು ಬ್ರಾಹ್ಮಣ ಕುಟುಂಬಕ್ಕೆ ಸೇರಿದ್ದ ಸುನಿಲ್ ಸಾರಂಗಿ ಎಂಬುವವರನ್ನು ವಿವಾಹವಾಗಿದ್ದರು.
ಮಗಳ ವಿವಾಹವನ್ನು ಸುದಾಮ್ ಅವರು ಅದ್ದೂರಿಯಾಗಿ ನೆರವೇರಿಸಿದ್ದರು. ವಿವಾಹದಲ್ಲಿ ಅಲ್ಲಿನ ಗವರ್ನರ್ ಎಸ್.ಸಿ.ಜಮೀರ್ ಹಾಗೂ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರು ಭಾಗವಹಿಸಿದ್ದರು.
ಇದೀಗ ಈ ವಿವಾಹದ ಮೇಲೆ ಕೆಂಗಣ್ಣು ಬೀರಿರುವ ಸಂಥಲ್ ಬುಡಕಟ್ಟು ಜನಾಂಗದ ಹಿರಿಯರು ಇದೀಗ ಸಚಿವರನ್ನು ತಮ್ಮ ಸಮುದಾಯದಿಂದ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.
ಸಂಥಲ್ ಜನಾಂಗವೊಂದು ಬುಡಕಟ್ಟು ಜನಾಂಗವಾಗಿದ್ದು, ಇದು ಭಾರತದಲ್ಲಿ 3ನೇ ದೊಡ್ಡ ಬುಡಕಟ್ಟು ಜನಾಂಗವಾಗಿದೆ. ಈ ಬುಡಕಟ್ಟು ಜನಾಂದಲ್ಲಿ ಅಂತರ್ಜಾತಿ ವಿವಾಹಕ್ಕೆ ಜಾಗವಿಲ್ಲ ಎಂಬ ಕಾರಣ ನೀಡುತ್ತಿರುವ ಅಲ್ಲಿನ ಹಿರಿಯರು ಇದೀಗ ಸಚಿವರನ್ನೇ ತಮ್ಮ ಸಮುದಾಯದಿಂದ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.
ಮರಾಂಡಿಯವರು ಒಡಿಶಾ ಬುಡಕಟ್ಟು ಜನಾಂಗದ ಏಕೈಕ ಹಾಗೂ ಪ್ರಮುಖ ನಾಯಕನಾಗಿದ್ದು, ಇವರು ಮಾಜಿ ಲೋಕಸಭಾ ಸಂಸದರಾಗಿ ಕಾರ್ಯನಿರ್ವಹಿಸಿದ್ದರು.2014ರಲ್ಲಿ ಬಿಜೆಡಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ನಂತರ ನವೀನ್ ಪಾಟ್ನಾಯಕ್ ಅವರ ಅಧಿಕಾರಾವಧಿಯಲ್ಲಿ ಬುಡಕಟ್ಟು ಕಲ್ಯಾಣ ಸಚಿವರಾಗಿ ನೇಮಕಗೊಂಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ