ವಿದೇಶಿ ಯುವತಿಗೆ ಥಳಿತ ಪ್ರಕರಣ: ಐವರ ಬಂಧನ, ಸಮಗ್ರ ವರದಿ ಕೇಳಿದ ರಾಹುಲ್

ತಾಂಜಾನಿಯಾ ಯುವತಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು...
ಸಾಂದರ್ಭಿಕ ಚಿತ್ರ-ರಾಹುಲ್ ಗಾಂಧಿ
ಸಾಂದರ್ಭಿಕ ಚಿತ್ರ-ರಾಹುಲ್ ಗಾಂಧಿ
ಬೆಂಗಳೂರು: ತಾಂಜಾನಿಯಾ ಯುವತಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ.
ಸೋಲದೇವನಹಳ್ಳಿ ಠಾಣೆಯ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. ಇನ್ನು, ಈ ಬಗ್ಗೆ ವಿಸ್ತೃತ ವರದಿ ನೀಡುವಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದ್ದಾರೆ. 
ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನೀಡಿದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್, ತಾಂಜಾನಿಯಾ ಯುವತಿಗೆ ಥಳಿಸಿರುವ ಪ್ರಕರಣದ ಸಮಗ್ರ ವರದಿ ನೀಡಿ ಹಾಗೂ ಆರೋಪಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ. 
ಘಟನೆ ವಿವರ:
ಮೂಲತಃ ಟಾಂಜೇನಿಯಾ ದೇಶಕ್ಕೆ ಸೇರಿದ 21 ವರ್ಷದ ಯುವತಿ ಬೆಂಗಳೂರಿನ ಆಚಾರ್ಯ ಕಾಲೇಜಿನಲ್ಲಿ  ಬಿಬಿಎ ಪದವಿಯ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದು, ಕಳೆದ ಭಾನುವಾರ  ರಾತ್ರಿ ಸುಂದರೇಶನ್ ಎಂಬ ತಮ್ಮ ಕಾರು ಚಾಲಕನೊಂದಿಗೆ ಹೆಸರುಘಟ್ಟದತ್ತ ಪ್ರಯಾಣಿಸಿದ್ದಾರೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಓರ್ವ ಪಾದಚಾರಿ ಮಹಿಳೆಗೆ ಢಿಕ್ಕಿ ಹೊಡೆದಿದೆ.  ಘಟನೆಯಲ್ಲಿ ಸುಮಾರು 35 ವರ್ಷದ ಸ್ಥಳೀಯ ಮಹಿಳೆ ಮೃತಪಟ್ಟಿದ್ದು, ಕಾರು ಚಾಲಕ ಸುಂದರೇಶನ್ ಕೂಡಲೇ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಅಪಘಾತವಾಗುತ್ತಿದ್ದಂತೆಯೇ ಓಡಿಬಂದ ಸಾರ್ವಜನಿಕರು ಕಾರಿನ ಹಿಂಬದಿಯಲ್ಲಿದ್ದ ಯುವತಿಯನ್ನು ಹೊರಗೆಳೆದು ಮನಸೋ ಇಚ್ಚೆ ಥಳಿಸಿದ್ದಾರೆ. ಅಲ್ಲದೆ ಕೆಲ ದುಷ್ಕರ್ಮಿಗಳು ಆಕೆಯ ಬಟ್ಟೆಯನ್ನು ಹರಿದು ಹಾಕಿದ್ದು, ಈ ವೇಳೆ ಸ್ಥಳೀಯ  ಯುವಕನೊಬ್ಬ ಟೀ-ಶರ್ಟ್ ನೀಡಲು ಮುದಾದಾಗ ಆತನಿಗೂ ಮನಸೋ ಇಚ್ಚೆ ಥಳಿಸಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಈ ವಿಚಾರ ವಿದ್ಯಾರ್ಥಿನಿಯ ಆಫ್ರಿಕಾ ಮೂಲದ ಸ್ನೇಹಿತರಿಗೆ ತಿಳಿದಿದ್ದು, ಘಟನಾ ಸ್ಥಳಕ್ಕೆ ಧಾವಿಸಿದ ಆಕೆಯ ಐದು ಸ್ನೇಹಿತರು ರಕ್ಷಣೆಗೆ ಮುದಾಗಿದ್ದಾರೆ. ಆದರೆ ಆಕ್ರೋಶಿತ  ಸಾರ್ವಜನಿಕರು ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಈ ನಡುವೆ ಆಕ್ರೋಶಿತ ಸಾರ್ವಜನಿಕರಿಂದ ತಪ್ಪಿಸಿಕೊಳ್ಳಲು ಯುವತಿ ಬಿಎಂಟಿಸಿ ಬಸ್ ಹತ್ತಲು ಪ್ರಯತ್ನಿಸಿದಾಗ ಬಸ್ ನಲ್ಲಿದ್ದ  ಪ್ರಯಾಣಿಕರು ಆಕೆಯನ್ನು ಹೊರದಬ್ಬಿದ್ದಾರೆ. ಬಳಿಕ ಆಕ್ರೋಶಿತ ಸಾರ್ವಜನಿಕರು ಅಪಘಾತಕ್ಕೆ ಕಾರಣವಾದ ಯುವತಿಯ ಕಾರು ಮತ್ತು ಆಕೆಯನ್ನು ರಕ್ಷಿಸಲು ಬಂದ ಸ್ನೇಹಿತರ ಕಾರಿಗೆ ಬೆಂಕಿ  ಹಚ್ಚಿದ್ದಾರೆ.
ಘಟನೆಯ ಬಳಿಕ ಯುವತಿ ಮತ್ತು ಆಕೆಯ ಸ್ನೇಹಿತರು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದು, ಠಾಣೆಯಲ್ಲಿದ್ದ ಪೊಲೀಸರು ಇವರ ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ. ಅಲ್ಲದೆ  ಅಪಘಾತಕ್ಕೆ ಕಾರಣವಾದ ಡ್ರೈವರ್ ನನ್ನು ಒಪ್ಪಿಸುವಂತೆಯೂ ಆ ಬಳಿಕ ದೂರು ಸ್ವೀಕರಿಸುವುದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಹಲ್ಲೆಗೊಳಗಾದ ವಿದ್ಯಾರ್ಥಿಗಳು "ಆಲ್  ಆಫ್ರಿಕಾ ಸ್ಟೂಡೆಂಟ್ಸ್ ಇನ್ ಬೆಂಗಳೂರು" ಸಂಸ್ಥೆಯ ನೆರವಿನೊಂದಿಗೆ ಆಫ್ರಿಕಾ ರಾಯಭಾರ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com