

ನವದೆಹಲಿ: ಪಠಾಣ್ ಕೋಟ್ ವಾಯು ನೆಲೆ ಮೇಲೆ ದಾಳಿ ನಡೆಸಿದ್ದ 6 ಭಯೋತ್ಪಾದಕರ ಪೈಕಿ ಇಬ್ಬರು ಒಳಗಿನವರಾಗಿರುವ ಸಾಧ್ಯತೆ ಇದೆ ಎಂದಿದ್ದ ಎನ್ ಐಎ ತನಿಖಾ ತಂಡ, ಈಗ ದಾಳಿಯಲ್ಲಿ 'ಒಳಗಿನವರು' ಶಾಮೀಲಾಗಿಲ್ಲ ಎಂದು ಹೇಳಿದೆ.
ವಾಯುನೆಲೆಯಲ್ಲಿ ದಾಳಿ ನಡೆಸಲು ಪಾಕಿಸ್ತಾನದ ಭಯೋತ್ಪಾದಕರಿಗೆ ಒಳಗಿನವರಿಂದಲೇ ಸಹಕಾರ ದೊರೆತಿದೆ ಎಂದು ಎನ್ಐಎ ಶಂಕಿಸಿತ್ತು. ಅಲ್ಲದೇ ಹತ್ಯೆಯಾದ 6 ಉಗ್ರರ ಪೈಕಿ ಇಬ್ಬರು ಒಳಗಿನವರಾಗಿರುವ ಸಾಧ್ಯತೆ ಇದೆ ಎಂದಿತ್ತು. ವಾಯುನೆಲೆ ಸಿಬ್ಬಂದಿಗಳನ್ನು ಕೂಲಂಕುಶವಾಗಿ ವಿಚಾರಣೆಗೊಳಪಡಿಸಿದ ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್ಐಎ ಪಠಾಣ್ ಕೋಟ್ ದಾಳಿಯಲ್ಲಿ ಒಳಗಿನವರು ಶಾಮೀಲಾಗಿರುವ ಸಾಧ್ಯತೆ ಇಲ್ಲ ಎಂದಿದೆ.
"ವಾಯುನೆಲೆ ಸಿಬ್ಬಂದಿಗಳನ್ನು ವಿಚಾರಣೆಗೊಳಪಡಿಸಲಾಯಿತು, ಅವರ ಹೇಳಿಕೆಗಳನ್ನು ಬೇರೆ ಸಾಕ್ಷ್ಯಗಳು ಸಹ ದೃಢೀಕರಿಸಿದ್ದು ಒಳಗಿನವರ ಸಹಕಾರದಿಂದ ಪಾಕ್ ಭಯೋತ್ಪಾದಕರು ವಾಯುನೆಲೆ ಮೇಲೆ ದಾಳಿ ನಡೆಸಿಲ್ಲ ಎಂದು ಎನ್ಐಎ ಸ್ಪಷ್ಟಪಡಿಸಿದೆ. ಎನ್ಐಎ ತಂಡ ವಾಯು ನೆಲೆಯಲ್ಲಿರುವ 3,500 ಜನರನ್ನು ಕೂಲಂಕುಷ ಪರಿಶೀಲನೆಗೊಳಪಡಿಸಿತ್ತು. ದಾಳಿಯಲ್ಲಿ ಒಳಗಿನವರ ಕೈವಾಡ ಇರುವ ಸಾಧ್ಯತೆಯನ್ನು ಎನ್ಐಎ ತಂಡ ಸಂಪೂರ್ಣವಾಗಿ ತಳ್ಳಿಹಾಕಿಲ್ಲ. ಕರೆ ದಾಖಲೆಗಳನ್ನು ಪರಿಶೀಲನೆ ನಡೆಸಬೇಕಿದ್ದು, ಇದರಲ್ಲಿ ಏನಾದರೂ ಸಂದೇಹಾಸ್ಪದ ಅಂಶಗಳಿವೆಯೇ ಎಂಬುದನ್ನು ಪರಿಶೀಲನೆ ನಡೆಸಬೇಕಿದೆ ಎಂದು ಎನ್ಐಎ ತಂಡ ಹೇಳಿದೆ.