ಭಾರತಕ್ಕೆ ಹೊವಿಟ್ಜರ್ ಫಿರಂಗಿ ಪೂರೈಕೆಗೆ ಅಮೆರಿಕ ಸಮ್ಮತಿ

ಅಮೆರಿಕ ಸೇನಾಪಡೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ಎಂ-777 ಹೊವಿಟ್ಜರ್ ಫಿರಂಗಿಯನ್ನು ಭಾರತ ಮಾರಾಟ ಮಾಡಲು ಅಮೆರಿಕದ ರಕ್ಷಣಾ ಸಚಿವಾಲಯ ಸಮ್ಮತಿ ಸೂಚಿಸಿದೆ...
ಎಂ-777 ಹವಿಟ್ಜರ್ ಫಿರಂಗಿ (ಸಂಗ್ರಹ ಚಿತ್ರ)
ಎಂ-777 ಹವಿಟ್ಜರ್ ಫಿರಂಗಿ (ಸಂಗ್ರಹ ಚಿತ್ರ)

ನವದೆಹಲಿ: ಅಮೆರಿಕ ಸೇನಾಪಡೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ಎಂ-777 ಹೊವಿಟ್ಜರ್ ಫಿರಂಗಿಯನ್ನು ಭಾರತ ಮಾರಾಟ ಮಾಡಲು ಅಮೆರಿಕದ ರಕ್ಷಣಾ ಸಚಿವಾಲಯ ಸಮ್ಮತಿ  ಸೂಚಿಸಿದೆ.

ಸತತ ಪ್ರಯತ್ನಗಳ ಬಳಿಕ ಮತ್ತು ಸುಧೀರ್ಘ ಅವಧಿಯ ಮಾತುಕತೆ ಬಳಿಕ ಅಮೆರಿಕ ಸರ್ಕಾರ ಭಾರತಕ್ಕೆ 145 ಎಂ-777 ಹೊವಿಟ್ಜರ್ ಫಿರಂಗಿಗಳನ್ನು ಮಾರಾಟ ಮಾಡಲು ಮುಂದಾಗಿದೆ. ಉಭಯ  ದೇಶಗಳ ಸುಮಾರು 700 ದಶಲಕ್ಷ ಡಾಲರ್ (4,787.65 ಕೋಟಿ ರು.) ಮೊತ್ತದ ಈ ಮಹತ್ವದ ಒಪ್ಪಂದದ ಪ್ರಕಾರ ಭಾರತಕ್ಕೆ 145 ಫಿರಂಗಿಗಳನ್ನು ನೀಡುವ ಕುರಿತು ಅಮೆರಿಕದ ರಕ್ಷಣಾ  ಸಚಿವಾಲಯ ಭಾರತದ ರಕ್ಷಣಾ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದೆ.



ಮೂಲಗಳ ಪ್ರಕಾರ 180 ದಿನಗಳ ಒಳಗೆ ಒಪ್ಪಂದ ಏರ್ಪಡುವ ಸಾಧ್ಯತೆ ಇದ್ದು, ಪ್ರಸ್ತುತ ಒಪ್ಪಂದ ಅಂತಿಮ ಹಂತದಲ್ಲಿದೆ ಎಂದು ತಿಳಿದುಬಂದಿದೆ. ಇದರ ಅಂಗವಾಗಿ ನವದೆಹಲಿಯಲ್ಲಿ ಫಿರಂಗಿ  ಪರೀಕ್ಷೆ ನಡೆಸಲಾಗುವುದು ಎಂದು ಹೇಳಲಾಗುತ್ತಿದೆ. ಬಳಿಕ ಮುಂದಿನ ಮೂರು ವರ್ಷಗಳ ಒಳಗೆ ಭಾರತಕ್ಕೆ 145 ಫಿರಂಗಿಗಳನ್ನು ಹಸ್ತಾಂತರಿಸಲಾಗುವುದು ಮತ್ತು ಈ ವರ್ಷದ ಅಂತ್ಯದಲ್ಲಿ  ಕನಿಷ್ಠ 2 ಫಿರಂಗಿಗಳನ್ನು ಭಾರತಕ್ಕೆ ರವಾನಿಸಲಾಗುವುದು ಎಂದು ಅಮೆರಿಕ ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಸದ್ಯ ರಷ್ಯಾ, ಇಸ್ರೇಲ್ ಮತ್ತು ಫ್ರಾನ್ಸ್ ದೇಶಗಳು ಭಾರತಕ್ಕೆ ಅತಿ ಹೆಚ್ಚು ರಕ್ಷಣಾ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿರುವ ದೇಶಗಳಾಗಿವೆ. ಇಂಡೋ-ಅಮೆರಿಕ ಫಿರಂಗಿ ಮಾರಾಟ ಒಪ್ಪಂದ ಏರ್ಪಟ್ಟರೆ ಆ ಪಟ್ಟಿಯಲ್ಲಿ ಅಮೆರಿಕ ಮುಂಚೂಣಿಗೆ ಬರಲಿದೆ. ಈ ಹಿಂದೆ ಭಾರತದ ವಿರೋಧದ ನಡುವೆಯೂ ಪಾಕಿಸ್ತಾನಕ್ಕೆ 8 ಎಫ್ -16 ಯುದ್ಧವಿಮಾನಗಳನ್ನು ನೀಡಲು ಅಮೆರಿಕ ಇತ್ತೀಚೆಗೆ ನಿರ್ಧರಿಸಿತ್ತು.

ಒಪ್ಪಂದದಲ್ಲಿ ಮೇಕ್ ಇನ್ ಇಂಡಿಯಾಗೆ ಒತ್ತು
ಇನ್ನು ಈ ಮಹತ್ವದ ಒಪ್ಪಂದದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾಗೆ ಹೆಚ್ಚು ಒತ್ತು ನೀಡಲಾಗಿದ್ದು, ಫಿರಂಗಿಯ ಪ್ರಮುಖ ಬಿಡಿಭಾಗಗಳು ಮತ್ತು ಇತರೆ ರಕ್ಷಣಾ  ಸಾಮಗ್ರಿಗಳನ್ನು ಭಾರತದಲ್ಲಿಯೇ ತಯಾರಿಸುವ ಕುರಿತು ಒಪ್ಪಂದದಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com