ನವದೆಹಲಿ: ಜಾಟ್ ಸಮುದಾಯದ ಮೀಸಲಾತಿಗೆ ಆಗ್ರಹಿಸಿ ಹರಿಯಾಣದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎದುರಾಗಿದ್ದ ನೀರು ಪೂರೈಕೆ ತೊಂದರೆಯಿಂದ ಸದ್ಯಕ್ಕೆ ಮುಕ್ತಿ ಸಿಕ್ಕಿದೆ.
ವಾಜಿರ್ ಬಾದ್ ಪಾಂಡ್ ಘಟಕದಲ್ಲಿ ನೀರಿನ ಮಟ್ಟ ಕುಸಿದ ಹಿನ್ನಲೆಯಲ್ಲಿ, ವಾಜಿರ್ ಬಾದ್, ಚಂದ್ರಾವಲ್ ಮತ್ತು ಓಕ್ಲಾ ಘಟಕಗಳು ನೀರು ಪೂರೈಕೆ ಮಾಡುತ್ತಿದೆ ಎಂದು ದೆಹಲಿ ಜಲ ಮಂಡಳಿ ಹೇಳಿದೆ.
ಈ ಮೂರು ಘಟಕಗಳಲ್ಲಿ ಸಾಷ್ಟು ನೀರು ಇದ್ದು, ಇದರಿಂದ ಉತ್ತರ ದೆಹಲಿ, ಕೇಂದ್ರ, ದಕ್ಷಿಣ ದೆಹಲಿ ಸೇರಿದಂತೆ ದೆಹಲಿ ಸುತ್ತಾಮುತ್ತಾ ನೀರು ಪೂರೈಕೆ ಮಾಡಬಹುದಾಗಿದೆ. ಈಗಾಗಲೇ ಮೂರು ಜಲ ಘಟಕಗಳಿಂದ ನೀರು ಪೂರೈಕೆ ಮಾಡಲಾಗುತ್ತಿದ್ದು, ಸದ್ಯಕ್ಕೆ ನೀರಿನ ಸಮಸ್ಯೆ ಬಗೆಹರಿದಿದೆ.
ಸರ್ಕಾರಿ ಕೆಲಸ ಮತ್ತು ಶೈಕ್ಷಣಿಕ ಕೇಂದ್ರಗಳಲ್ಲಿ ಮೀಸಲಾತಿಗಾಗಿ ಪ್ರತಿಭಟನೆ ನಡೆಸುತ್ತಿರುವ ಹರಿಯಾಣದ ಜಾಟ್ ಸಮುದಾಯದವರು ದೆಹಲಿಗೆ ಕುಡಿಯುವ ನೀರು ಸರಬರಾಜು ಮಾಡುವ ಮುನಾಕ್ ನಾಲೆಯನ್ನು ಒಡೆದು ಹಾಕಿದ್ದರು. ಈ ಹಿನ್ನಲೆಯಲ್ಲಿ ದೆಹಲಿಗೆ ನೀರಿನ ಅಭಾವ ಎದುರಾಗಿತ್ತು.