

ಅಹಮದಾಬಾದ್: ರಾಷ್ಟ್ರದ್ರೋಹ ಆರೋಪದ ಮೇಲೆ ಜೈಲಿನಲ್ಲಿರುವ ಗುಜರಾತ್ ನ ಪಾಟಿದಾರ್ ಅನಾಮತ್ ಆಂದೋಲನ ಸಮಿತಿ(ಪಿಎಎಸ್) ಸಂಚಾಲಕ ಹಾರ್ದಿಕ್ ಪಟೇಲ್ ಗೆ ಗುಜರಾತ್ ಹೈಕೋರ್ಟ್ ಜಾಮೀನು ನೀಡಿದ್ದು, ಆರು ತಿಂಗಳ ಕಾಲ ಗುಜರಾತ್ ತೊರೆಯುವಂತೆ ಆದೇಶಿಸಿದೆ.
ಹಾರ್ದಿಕ್ ಪಟೇಲ್ ವಿರುದ್ಧವಿದ್ದ ಎರಡು ರಾಷ್ಟ್ರದ್ರೋಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ಜಾಮೀನು ನೀಡಿದ್ದು, ಶಾಸನಸಭೆ ಕಚೇರಿ ಧ್ವಂಸ ಪ್ರಕರಣದ ವಿಚಾರಣೆ ಸೋಮವಾರ ನಡೆಯಲಿದ್ದು ಆ ಪ್ರಕರಣದಲ್ಲಿ ಜಾಮೀನು ಸಿಕ್ಕರೆ ಕಳೆದ 9 ತಿಂಗಳ ಸೆರೆಮನೆ ವಾಸ ಕೊನೆಯಾಗಲಿದೆ.
ಯುವಕನೊಬ್ಬನಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಪೊಲೀಸರನ್ನು ಕೊಲ್ಲುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಸೂರತ್ ಪೊಲೀಸರು ಹಾರ್ದಿಕ್ ಪಟೇಲ್ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿತ್ತು.
ಹಾರ್ದಿಕ್ ಪಟೇಲ್ ಬೆಂಬಲಿಗರು ಗುಜರಾತಿನಾದ್ಯಂತ ಗಲಭೆ ಎಬ್ಬಿಸಿದ್ದರಿಂದ ಆತನನ್ನು ಸೆರೆ ಮನೆಯಲ್ಲಿ ಇಡಲಾಗಿತ್ತು. ಕೋರ್ಟ್ ಮುಂದೆ ಹಾರ್ದಿಕ್ ಪಟೇಲ್ ತಮ್ಮನ್ನು ಬಿಡುಗಡೆ ಮಾಡಿದರೆ ಶಾಂತಿಯುತವಾಗಿ ಹೋರಾಟ ಮಾಡುವುದಾಗಿ ವಿನಂತಿಸಿಕೊಂಡಿದ್ದ ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಜಾಮೀನು ನೀಡಿದೆ.