ಗೌಹಾಟಿ: ಕಳೆದ ಕೆಲವು ದಿನಗಳಿಂದ ಅಸ್ಸಾಂ ನ ಏಳು ಜಿಲ್ಲೆಗಳಲ್ಲಿರುವ ತೀವ್ರ ಪ್ರವಾಹದಿಂದ ಒಂದು ಲಕ್ಷಕ್ಕೂ ಹೆಚ್ಚು ಜನರ ಜೀವನಕ್ಕೆ ಹಾನಿಯಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ಹೇಳಿದ್ದಾರೆ.
ಲಖೀಮಪುರ್, ನಂಗಾವ್, ಗೋಲಾಘಾಟ್, ಮೋರಿಗಾಂವ್, ಬಿಸ್ವಂತ್, ಬರ್ಪೆಟಾ ಮತ್ತು ಜೋರ್ಹಾತ್ ಜಿಲ್ಲೆಗಳ 213 ಗ್ರಾಮಗಳ 1,12,307 ಜನ ಪ್ರವಾಹದಿಂದ ಹಾನಿಗೊಂಡಿದ್ದಾರೆ ಎಂದು ಅಸ್ಸಾಂ ರಾಜ್ಯದ ವಿಕೋಪ ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ಹೇಳಿದ್ದಾರೆ.
ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳಲ್ಲಿ ಇನ್ನು ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಪರಿಸ್ಥಿತಿ ಇನ್ನು ಹೆಚ್ಚು ಹದಗೆಡುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
"ಜೋರ್ಹಾತ್, ಗೋಲಾಘಾಟ್ ಮತ್ತು ಲಖೀಮಪುರ್ ಜಿಲ್ಲೆಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಪ್ರವಾಹದಿಂದ ಹಾನಿಗೊಂಡವರಿಗೆ ಈ ಜಿಲ್ಲೆಗಳಲ್ಲಿ ಆರು ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ.
ಸರ್ಕಾರದ ಅಂದಾಜಿನ ಪ್ರಕಾರ 6978 ಎಕರೆಗೂ ಹೆಚ್ಚಿನ ಬೆಳೆ ನಾಶವಾಗಿದೆ. ಕೆಲವು ಪ್ರದೇಶಗಳಲ್ಲಿ ಬ್ರಹ್ಮಪುತ್ರ ನದಿ ಅಪಾಯಕಾರಿ ಮಟ್ಟಕ್ಕಿಂತಲೂ ಮೇಲೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.