ಗುಜರಾತ್ ನಲ್ಲಿ ದಲಿತರ ವಿರುದ್ಧ ದೌರ್ಜನ್ಯ ಪ್ರಕರಣ: ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ

ಗುಜರಾತ್ ನ ಉನಾದಲ್ಲಿ ದಲಿತರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿ, ವಿಪಕ್ಷಗಳು ಗದ್ದಲ ಉಂಟು ಮಾಡಿದ್ದರಿಂದ ರಾಜ್ಯಸಭಾ ಕಲಾಪಕ್ಕೆ ಕೆಲ ಕಾಲ ಅಡ್ಡಿ ಉಂಟಾಗಿದೆ.
ರಾಜ್ಯಸಭೆ
ರಾಜ್ಯಸಭೆ

ನವದೆಹಲಿ: ಗುಜರಾತ್ ನ ಉನಾದಲ್ಲಿ ದಲಿತರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿ, ವಿಪಕ್ಷಗಳು ಗದ್ದಲ ಉಂಟು ಮಾಡಿದ್ದರಿಂದ ರಾಜ್ಯಸಭಾ ಕಲಾಪಕ್ಕೆ ಕೆಲ ಕಾಲ ಅಡ್ಡಿ ಉಂಟಾಗಿದೆ.  

ವಿವಿಧ ಪ್ರಕರಣಗಳಲ್ಲಿ ದಲಿತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಹಾಗೂ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ವಿಪಕ್ಷಗಳಾದ ಬಿಎಸ್ ಪಿ, ತೃಣಮೂಲ ಕಾಂಗ್ರೆಸ್, ಕಾಂಗ್ರೆಸ್ ಪಕ್ಷಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದವು.

ದಲಿತರ ದೌರ್ಜನ್ಯಗಳ ಬಗ್ಗೆ ಚರ್ಚೆ ನಡೆಸಬೇಕೆಂದು ಪ್ರತಿಪಕ್ಷಗಳು ನೀಡಿದ್ದ ನೋಟಿಸ್ ನ್ನು ರಾಜ್ಯಸಭಾ ಸ್ಪೀಕರ್ ಪರಿಶೀಲನೆ ನಡೆಸುತ್ತಿದ್ದ ಹೊರತಾಗಿಯೂ, ಪ್ರತಿಪಕ್ಷಗಳ ಸದಸ್ಯರು ಗದ್ದಲ ಉಂಟು ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಗದ್ದಲ ಉಂಟಾದ ಹಿನ್ನೆಲೆಯಲ್ಲಿ ರಾಜ್ಯಸಭಾ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಲಾಗಿತ್ತು.

ಕಲಾಪ ಪುನಾರಂಭವಾದ ನಂತರ ಸದನಕ್ಕೆ ಮಾಹಿತಿ ನೀಡಿದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಥಾವರ್ ಚಾಂದ್ ಗೆಹ್ಲೋಟ್, ದಲಿತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಬಗ್ಗೆ ಗುಜರಾತ್ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಆತ್ಮಹತ್ಯೆ ಮಾಡಿಕೊಂಡ ದಲಿತರ ಕುಟುಂಬಗಳಿಗೆ ಸರ್ಕಾರದಿಂದ ಆರ್ಥಿಕ ನೆರವು ನೀಡಲಾಗುವುದು  ಎಂದು ತಿಳಿಸಿದ್ದಾರೆ.  ಗುಜರಾತ್ ನ ಉನಾದಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ಶಂಕೆಯಲ್ಲಿ ಗೋ ಸಂರಕ್ಷಣಾ ಕಾರ್ಯಕರ್ತರು ನಾಲ್ವರು ದಲಿತರನ್ನು ವಾಹನಕ್ಕೆ ಕಟ್ಟಿ ಥಳಿಸಿರುವ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ದಲಿತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ರಾಜ್ಯಸಭೆಯಲ್ಲಿ ವಿಪಕ್ಷಗಳು ಪ್ರತಿಭಟನೆ ನಡೆಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com