ನವದೆಹಲಿ: ಗುಜರಾತ್ ನ ಉನಾದಲ್ಲಿ ದಲಿತ ಯುವಕರ ಮೇಲೆ ನಡೆದ ಹಲ್ಲೆಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಖಂಡಿಸಿದ್ದು, ಕೇಂದ್ರ ಸರ್ಕಾರ ದಲಿತರಿಗೆ ರಕ್ಷಣೆ ನೀಡಬೇಕೆಂದು ಕೋರಿದರು.
ಉನಾದಲ್ಲಿನ ಘಟನೆ ದಲಿತರ ಮೇಲಿನ ಸಂಘಟಿತ ಅಪರಾಧ. ಇದನ್ನು ಒಪ್ಪಲು ಸಾಧ್ಯವೇ ಇಲ್ಲ. ದಲಿತರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಹೇಳಿದರು.
ಸಂಸತ್ತಿನಲ್ಲಿಯೂ ವಿಷಯ ಪ್ರಸ್ತಾಪಿಸಿದ ತೃಣಮೂಲ ಕಾಂಗ್ರೆಸ್ ಘಟನೆ ಮೇಲೆ ಚರ್ಚೆ ನಡೆಸುವಂತೆ ಕೋರಿದೆ.
ಹಸುವೊಂದನ್ನು ಕೊಂದದ್ದಕ್ಕಾಗಿ ಗುಜರಾತ್ ನ ಉನಾದಲ್ಲಿ ದಲಿತ ಗುಂಪಿನ ಮೇಲೆ ಜಾಗೃತ ಹಸು ರಕ್ಷಣಾ ಗುಂಪು ಹಲ್ಲೆ ನಡೆಸಿದ್ದಕ್ಕಾಗಿ ಗುಜರಾತ್ ನ ಸೌರಾಷ್ಟ್ರ ಭಾಗ ಕಳೆದ ವಾರದಿಂದ ಘರ್ಷಣೆಪೀಡಿತ ಪ್ರದೇಶವಾಗಿದೆ.